ಹಿಜಾಬ್ ವಿವಾದ: ಹೈಕೋರ್ಟ್’ಗೆ ವಿದ್ಯಾರ್ಥಿಗಳಿಂದ ಹೊಸ ಮನವಿ

ಬೆಂಗಳೂರು: ಹಿಜಾಬ್ ವಿವಾದ ಸೋಮವಾರ ಹೊಸ ತಿರುವು ಪಡೆದುಕೊಂಡಿದ್ದು, ಶಾಲಾ ಸಮವಸ್ತ್ರಕ್ಕೆ ಹೊಂದುವ ಬಣ್ಣದ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಮುಸ್ಲಿಂ ವಿದ್ಯಾರ್ಥಿಗಳು ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.

ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಬಟ್ಟೆಯ ಬಳಕೆಯನ್ನು ನಿರ್ಬಂಧಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ, ಹಿಜಾಬ್ ಪರವಾಗಿ ಅರ್ಜಿ ಸಲ್ಲಿಸಿರುವ ಹುಡುಗಿಯರು ಇಂದು ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಶಾಲಾ ಸಮವಸ್ತ್ರಕ್ಕೆ ಹೊಂದುವ ಬಣ್ಣದ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆ ಎಂ ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಂ ದೀಕ್ಷಿತ್ ಅವರನ್ನೊಳ ಗೊಂಡ ಹೈಕೋರ್ಟ್‌ನ ಪೂರ್ಣ ಪೀಠಕ್ಕೆ ಬಾಲಕಿಯರು ಮನವಿ ಮಾಡಿದ್ದಾರೆ.

ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಪರವಾಗಿ ವಾದ ಮಂಡಿಸಿದ ವಕೀಲ ದೇವದತ್ತ್ ಕಾಮತ್ ಅವರು, ‘ನಾನು ರಾಜ್ಯ ಸರ್ಕಾರದ ಆದೇಶವನ್ನು ಮಾತ್ರ ಪ್ರಶ್ನಿಸುತ್ತಿಲ್ಲ. ಸಮವಸ್ತ್ರಕ್ಕೆ ಹೊಂದುವ ಬಣ್ಣದ ಸ್ಕಾರ್ಫ್ ಧರಿಸಲು ಅವಕಾಶ ನೀಡುವಂತೆ ಸಕಾರಾತ್ಮಕ ಆದೇಶವನ್ನು ಕೇಳುತ್ತೇನೆ ಎಂದು ಪೀಠಕ್ಕೆ ತಿಳಿಸಿದರು.

ಕೇಂದ್ರೀಯ ಶಾಲೆಗಳು ಮುಸ್ಲಿಂ ಹುಡುಗಿಯರು ಶಾಲಾ ಸಮವಸ್ತ್ರದ ಬಣ್ಣದ ಶಿರಸ್ತ್ರಾಣವನ್ನು ಧರಿಸಲು ಅನುಮತಿ ನೀಡುತ್ತವೆ ಮತ್ತು ಅದೇ ರೀತಿ ಇಲ್ಲಿಯೂ ಮಾಡಬಹುದು ಎಂದು ಕಾಮತ್ ಪ್ರತಿಪಾದಿಸಿದರು. ಮುಸ್ಲಿಂ ವಿದ್ಯಾರ್ಥಿಗಳ ಪ್ರಕಾರ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಮತ್ತು ಅದರ ಬಳಕೆಯನ್ನು ನಿರ್ಬಂಧಿಸುವುದು ಭಾರತೀಯ ಸಂವಿಧಾನದ 25 ನೇ ವಿಧಿಯನ್ನು ಉಲ್ಲಂಘಿಸುತ್ತದೆ. “ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯ ಮತ್ತು ಈ ಭಾಗದ ಇತರ ನಿಬಂಧನೆಗಳಿಗೆ ಒಳಪಟ್ಟು, ಎಲ್ಲಾ ವ್ಯಕ್ತಿಗಳು ಆತ್ಮಸಾಕ್ಷಿಯ ಸ್ವಾತಂತ್ರ್ಯಕ್ಕೆ ಸಮಾನವಾಗಿ ಅರ್ಹರಾಗಿದ್ದಾರೆ ಮತ್ತು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಪ್ರಚಾರ ಮಾಡುವ ಹಕ್ಕನ್ನು ಹೊಂದಿದ್ದಾರೆ” ಎಂದರು.

Leave a Reply

Your email address will not be published. Required fields are marked *

error: Content is protected !!