ನಿಗದಿ ಪಡಿಸಿದ ವೇಳೆಯಲ್ಲಿ ಅನಿಲ ಟ್ಯಾಂಕರ್’ಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು,ಫೆ.14: ನಿಗದಿ ಪಡಿಸಿರುವ (ಹಗಲು) ವೇಳೆಯಲ್ಲಿಯೇ ಅನಿಲ್ ಟ್ಯಾಂಕರುಗಳು ಸಂಚರಿಸುವ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದರು.
ಅವರು ಫೆ.14ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯನ್ನು ಹಾದೂಹೋಗುವ ಹೆದ್ದಾರಿಗಳಲ್ಲಿ ಗ್ಯಾಸ್ ಟ್ಯಾಂಕರ್‍ಗಳ ಅಸುರಕ್ಷಿತ ಚಾಲನೆ ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತದೆ, ಅಲ್ಲದೇ ಅದು ಸಾರ್ವಜನಿಕರ ಸುಗಮ ಸಂಚಾರಕ್ಕೂ ಅನಾನುಕೂಲವಾಗುತ್ತದೆ, ಒಂದು ವೇಳೆ ಅವುಗಳು ಅಪಘಾತಕ್ಕೀಡಾ ದಲ್ಲಿ ಹೆಚ್ಚಿನ ಅನಾಹುತವು ಸಂಭವಿಸುತ್ತದೆ, ಈ ಕಾರಣಗಳಿಂದಾಗಿ ಗ್ಯಾಸ್ ಟ್ಯಾಂಕರ್‍ಗಳ ಚಾಲನೆಗೆ ನಿಗದಿ ಪಡಿಸಿದ ಅವಧಿಯಲ್ಲಿ ಮಾತ್ರ ಅವುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ಅದನ್ನು ಉಲ್ಲಂಘಿಸಿದ್ದಲ್ಲೀ ಸಂಬಂಧಿಸಿ ದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಎಚ್ಚರಿಸಿದರು.
ಅನಿಲ ಟ್ಯಾಂಕರ್‍ಗಳು ಅಪಘಾತಕ್ಕಿಡಾದಾಗ ರಸ್ತೆಗಳು ಹೆಚ್ಚು ಕಾಲ ಬಂದ್ ಆಗಿ, ವಾಹನ ಸಂಚಾರ ತೀವ್ರ ಅಡಚಣೆಯುಂಟಾಗುತ್ತದೆ, ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ವಿಪರೀತವಾಗುತ್ತದೆ, ಅಪಘಾತವಾದ ಸಂದರ್ಭದಲ್ಲಿ ಗ್ಯಾಸ್ ಟ್ಯಾಂಕರ್‍ಗಳನ್ನು ತೆರವುಗೊಳಿಸಲು ಗ್ಯಾಸ್ ಕಂಪನಿಯ ಅಧಿಕಾರಿಗಳು ತುರ್ತಾಗಿ ಸ್ಪಂದಿಸಬೇಕು ಎಂಬ ನಿರ್ದೇಶನವನ್ನು ಅವರು ನೀಡಿದರು.
ಟ್ಯಾಂಕರ್‍ಗಳಿಗೆ ಕಡ್ಡಾಯವಾಗಿ ಇಬ್ಬರು ಚಾಲಕರಿರಬೇಕು, ರಾತ್ರಿ ವೇಳೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬಾರದು, ಒಂದುವೇಳೆ ಟ್ಯಾಂಕರ್‍ಗಳು ರಾತ್ರಿ ಸಂಚರಿಸಬೇಕಾದಲ್ಲೀ ಜಿಪಿಎಸ್‍ಅನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು.
ಕಾರ್ಖಾನೆಗಳು ಹಾಗೂ ಬಾಯ್ಲರ್‍ಗಳ ಉಪನಿರ್ದೇಶಕ ರಾಜೇಶ್ ಮಿಶ್ರಿಕೋಟಿ, ಜಿಲ್ಲಾ ಬಿಕ್ಕಟ್ಟು ನಿರ್ವಹಣಾ ಕೋಶದ ಪರಿಣತ ವಿಜಯ್‍ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಅಗ್ನಿ ಶಾಮಕ ದಳದ ಮುಖ್ಯಸ್ಥ ನವಾಜ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.