ಹಿಜಾಬ್ ವಿವಾದ: ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

ಬೆಂಗಳೂರು ಫೆ.14: ಹಿಜಾಬ್ ವಿವಾದ ಹೆಚ್ಚಾಗುತ್ತಿದ್ದಂತೆ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ರಾಜ್ಯ ಹೈಕೋರ್ಟ್ ನ ತ್ರೀ ಸದಸ್ಯ ಪೀಠ ಮುಂದಿನ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಪ್ರಕರಣದಲ್ಲಿ ಹಲವಾರು ಸಾಂವಿಧಾನಿಕ ಅಂಶಗಳು, ಧಾರ್ಮಿಕ ಅಂಶಗಳು ಅಡಕವಾಗಿರುವುದರಿಂದ. ಇದೊಂದು ಸೂಕ್ಷ್ಮ ಪ್ರಕರಣ ಆಗಿದ್ದು, ಸುಧೀರ್ಘ ವಿಚಾರಣೆಯ ಅಗತ್ಯತೆಯನ್ನು ಮನಗಂಡು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾ. ಖಾಜಿ ಜೈ ಬುನ್ನಿಸಾ ಮೊಹಿದ್ದೀನ್ ಅವರನ್ನೊಳಗೊಂಡ ಹೈಕೋರ್ಟ್ ನ ತ್ರೀ ಸದಸ್ಯ ಪೀಠ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ. 

4ನೇ ದಿನದ ವಿಚಾರಣೆ ಇಂದು ಮಧ್ಯಾಹ್ನ ಆರಂಭಗೊಂಡಿದ್ದು, ಇಂದಿನ ವಿಚಾರಣೆ ಕುತೂಹಲಕರ ಅಂಶಗಳನ್ನು ಒಳಗೊಂಡಿತ್ತು. ಅರ್ಜಿಯ ವಿಚಾರಣೆ ಆರಂಭದಲ್ಲಿ ಅರ್ಜಿದಾರರ ಪರ ವಕೀಲರಾದ ದೇವದತ್ ಕಾಮತ್ ಅವರು, ಸರಕಾರದ ಸಮವಸ್ತ್ರ ಆದೇಶ ವಿವೇಚನಾ ರಹಿತವಾಗಿದೆ. ಹಿಜಾಬ್ ಸಂವಿಧಾನದ 25(1) ರಲ್ಲಿ ಇಲ್ಲ ಎಂದಿರುವ ಸರಕಾರದ ಹೇಳಿಕೆಯನ್ನು ತಪ್ಪು ಎಂದು ಸಾಬೀತು ಪಡೆಸಬಲ್ಲೆ ಎಂದು ಹೇಳಿದರು. ಯಾವ ಸಂದರ್ಭದಲ್ಲಿ ಧಾರ್ಮಿಕ ಆಚರಣೆ ತಡೆಗಟ್ಟಲು ಸಾಧ್ಯವಿದೆ ಎಂಬ ಬಗ್ಗೆ ಉತ್ತರಿಸಿದ ದೇವದತ್ ಕಾಮತ್ ಅವರು, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ವಿಚಾರಕ್ಕೆ ಧಾರ್ಮಿಕ ಆಚರಣೆಯನ್ನು ನಿರ್ಬಂಧಿಸಬಹುದು ಎಂದು ಹೇಳಿದರು. ಇದೇ ವೇಳೆ ಕೇರಳ, ಬಾಂಬೆ, ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪನ್ನು ಇಂದೂ ಕೂಡಾ ವಕೀಲ ದೇವದತ್ ಕಾಮತ್ ಉಲ್ಲೇಖಿಸಿದರು.

ಹಾಗೂ ಇದೇ ವೇಳೆ ದೇವದತ್ ಕಾಮತ್ ಅವರು ಮಲೇಷ್ಯಾ ಕೋರ್ಟ್ ತೀರ್ಪಿನ ಬಗ್ಗೆ ಉಲ್ಲೇಖಿಸಿದಾಗ ನ್ಯಾ.ಕೃಷ್ಣಾ ಎಸ್ ದೀಕ್ಷಿತ್ ಅವರು ಮಲೇಷ್ಯಾ ಜಾತ್ಯಾತೀತ ರಾಷ್ಟ್ರವೇ ಅಲ್ಲಿನ ತೀರ್ಪು ಇಲ್ಲಿಗೆ ಅನ್ವಸಲಾಗುತ್ತದೆಯೇ ಎಂದು ಪ್ರಶ್ನಿಸಿದರು.ಇದಕ್ಕೆ ಪ್ರತ್ಯುತ್ತರ ನೀಡಿದ ದೇವದತ್ ಅವರು ಇಲ್ಲ ಮಲೇಷ್ಯಾ ಇಸ್ಲಾಮಿಕ್ ರಾಷ್ಟ್ರ, ನಮ್ಮ ದೇಶದಲ್ಲಿಯೇ ಹಿಜಾಬ್ ಪರವಾಗಿ ನೀಡದ ಅನೇಕ ತೀರ್ಪುಗಳಿವೆ ಎಂದು ಹಿಜಾಬ್ ಇಸ್ಲಾಂ ನ ಅಗತ್ಯ ಎಂದು ಕೇರಳ ಹೈಕೋರ್ಟ್ ನೀಡಿದ ತೀರ್ಪುನ್ನು ಉಲ್ಲೇಖಿಸಿದರು. ಇದೇ ವೇಳೆ ಬಾಂಬೆ ಹೈಕೋರ್ಟ್ ಹಾಗೂ ಶೀರೂರು ಮಠದ ತೀರ್ಪನ್ನು ಉಲ್ಲೇಖಿಸಿ, ಜೈನ ಧರ್ಮದ ವಿಚಾರವಾಗಿ ಧರ್ಮವನ್ನು ಹೊರಗಿನ ವ್ಯಕ್ತಿಗಳ ಆಕ್ಷೇಪಿಸುವಂತಿಲ್ಲ ಎಂದು ನೀಡಿರುವ ರತಿಲಾಲ್ ಗಾಂಧಿ ಪ್ರಕರಣದ ತೀರ್ಪನ್ನು ಇದೇ ವೇಳೆ ಉಲ್ಲೇಖಿಸಿದರು.

ಸಂವಿಧಾನದಲ್ಲಿ ಯಾವ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗೆ ನಿರ್ಬಂಧಿಸಬಹುದು ಎಂದು ತಿಳಿಸುವ ವೇಳೆ ಅರ್ಜಿದಾರರ ಪರ ವಕೀಲರು ಬಿಟ್ಟು ಹೋದ ಸಮಾಜ ಕಲ್ಯಾಣ ಹಾಗೂ ಸುಧಾರಣೆಯ ಸಲುವಾಗಿ ಧಾರ್ಮಿಕ ಆಚರಣೆಗಳಿಗೆ ನಿರ್ಭಂಧ ಹೇರಬಹುದು ಎಂದಿರುವ ಅಂಶವನ್ನು ಓದಿ ಈ ಎರಡು ಅಂಶಗಳನ್ನು ಯಾಕೆ ಬಿಟ್ಟಿರಿ ಎಂದು ಪ್ರಶ್ನಿಸಿದರು. ಇದೇ ವೇಳೆ ಅತ್ಯಗತ್ಯ ಆಚರಣೆಗಳು ಪರಿಪೂರ್ಣ ಹಕ್ಕೇ ಸರಕಾರ ಈ ಆಚರಣೆಗಳನ್ನು ನಿರ್ಭಂಧಿಸಬಹುದೇ ಎಂದು ಪ್ರಶ್ನಿಸಿದರು. ಹಾಗೂ ಸಮಾಜ ಕಲ್ಯಾಣ, ಸುಧಾರಣೆಗಾಗಿಯೂ ಧಾರ್ಮಿಕ ಆಚರಣೆ ನಿರ್ಭಂಧಿಸಬಹುದಲ್ಲಾ ಎಂದು ಮುಖ್ಯ ನ್ಯಾಯ ಮೂರ್ತಿಗಳು ಪ್ರಶ್ನಿಸಿದರು.

ಇದೇ ವೇಳೆ ಅರ್ಜಿದಾರರ ಪರ ವಕೀಲರಾದ ದೇವದತ್ ಕಾಮತ್ ಅವರು ವಾದ ಮಂಡನೆ ವೇಳೆ ತ್ರಿವಳಿ ತಲಾಖ್ ಬಗ್ಗೆ ಉಲ್ಲೇಖಿಸಿದರು ಆಗ ಮುಖ್ಯ ನ್ಯಾಯಮೂರ್ತಿಗಳು ಖುರಾನ್ ನಲ್ಲಿ ತಿಳಿಸಿರುವ ಎಲ್ಲಾ ಅಂಶಗಳು ಪ್ರಮುಖವೇ ಎಂದು ಪ್ರಶ್ನಿಸಿದ್ದಾರೆ. ಆಗ ವಕೀಲರಾದ ದೇವದತ್ ಕಾಮತ್ ಅವರು ಪ್ರತಿಯಾಗಿ ಖುರಾನ್ ಇಸ್ಲಾಂನ ಎಲ್ಲಾ ವಿಚಾರಗಳನ್ನು ಮಂಡಿಸುತ್ತಿಲ್ಲ, ಇಲ್ಲಿ ಹಿಜಾಬ್ ಬಗ್ಗೆ ಮಾತ್ರ ಹೇಳುತ್ತಿರುವುದು ಎಂದು ತಿಳಿಸಿದರು. ಹಾಗೂ ಇದೇ ವೇಳೆ ವಾದ ಮಂಡಿಸಿದ ದೇವದತ್ ಕಾಮತ್ ಅವರು, ಹಿಜಾಬ್ ಧರಿಸುವುದು ಧಾರ್ಮಿಕ ಸ್ವಾತಂತ್ರ್ಯದ ಭಾಗವಾಗಿದೆ. ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಆಚರಣೆಯ ವಿಚಾರವಾಗಿ ಸರಕಾರ ಕಾಲೇಜು ಆಡಳಿತ ಮಂಡಳಿಗೆ ನಿರ್ಧರಿಸಲು ಜವಾಬ್ದಾರಿ ಹಸ್ತಾಂತರ ಮಾಡಿರುವುದು ಸರಿಯಲ್ಲ ಎಂದು ವಾದ ಮಂಡಿಸಿದರು.

ಕಾಲೇಜುಗಳಲ್ಲಿ ಶಾಸಕರನ್ನು ಒಳಗೊಂಡ ಆಡಳಿತ ಮಂಡಳಿ ಆಯಾ ಕಾಲೇಜುಗಳಿಗೆ ಸಮವಸ್ತ್ರ ಜಾರಿ ಮಾಡಿದರೆ ತಪ್ಪಲ್ಲ ಆದರೆ ಇಲ್ಲಿ‌ ಕಾನೂನು ಸುವ್ಯವಸ್ಥೆ ಹೆಸರಿರಲ್ಲಿ ಧಾರ್ಮಿಕ ಆಚರಣೆಗಳನ್ನು ತಡೆಯುವುದು ಸರಿಯೇ ಎಂದು ವಾದ ಮಂಡಿಸಿದರು. ಆಗ ನ್ಯಾಯ ಮೂರ್ತಿಗಳು ಸರಕಾರ ಸಮವಸ್ತ್ರ ನಿರ್ಧರಿಸಲು ಆಡಳಿತ ಮಂಡಳಿಗೆ ಅವಕಾಶ ನೀಡಿದಲ್ಲೆ, ಸಂವಿಧಾನದ 25(1) ಅಧಿಕಾರ ನೀಡಿದೆಯೇ ಎಂದು ಪ್ರಶ್ನಿಸಿದರು ಹಾಗೂ ಸರಕಾರ ಕಾನೂನು ಸುವ್ಯವಸ್ಥೆ ಹೆಸರಿನಲ್ಲಿ ಹಿಜಾಬ್ ನಿಯಂತ್ರಿಸಿದೆಯೇ ಹಾಗಿದ್ದರೆ ತಿಳಿಸಿ ಅರ್ಜಿಯನ್ನು ವಿಚಾರಣೆ ನಡೆಸುತ್ತೇವೆ ಎಂದು ತಿಳಿಸಿದರು. ಈ ವೇಳೆ ಅರ್ಜಿದಾರರ ಪರ ವಕೀಲರು ಹೌದು ಎಂದು ಪ್ರತಿಕ್ರಿಯೆ ನೀಡಿದಾಗ ಅಡ್ವಕೇಟ್ ಪ್ರಭುಲಿಂಗ ನಾವದಗಿ ಅವರು ಮಧ್ಯಪ್ತವೇಶಿಸಿ, ಸರಕಾರದ ಆದೇಶದ ಕನ್ನಡ ಭಾಷಾಂತರದ ಸಂದರ್ಭದಲ್ಲಿ ತಪ್ಪಾಗಿದೆ. ಅದಕ್ಕಾಗಿ ಹೊಸ ಭಾಷಾಂತರವನ್ನು ನೀಡಿದ್ದೇವೆ ಅದನ್ನೂ ಪರಿಗಣಿಸಬೇಕು ಎಂದು ನ್ಯಾಯಲಯವನ್ನು ಕೇಳಿಕೊಂಡರು.

ಇದೇ ವೇಳೆ ಅರ್ಜಿದಾರರ ಪರ ವಕೀಲರು, ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಬಣ್ಣದ ಹಿಜಾಬ್ ಧರಿಸಿ ಶಿಕ್ಷಣ ಪಡೆಯಲು ಅವಕಾಶ ನೀಡಬೇಕು ಎಂದು ಕೇಳಿಕೊಂಡರು. ಪ್ರಕರಣದ ವಾದ ವಿವಾದ ಆಲಿಸಿದ ನ್ಯಾಯ ಮೂರ್ತಿಗಳು ನಾಳೆ ಮಧ್ಯಾಹ್ನಕ್ಕೆ ವಿಚಾರಣೆಯನ್ನು ಮುಂದೂಡಿದ್ದು, ನಾಳೆ ಮಧ್ಯಾಹ್ನ 2.30 ಕ್ಕೆ ಅರ್ಜಿಯ ವಿಚಾರಣೆ ನಡೆಯಲಿದ್ದು ಮತ್ತಷ್ಟು ಅಂಶಗಳು ತಿಳಿಯಲಿದೆ.

Leave a Reply

Your email address will not be published. Required fields are marked *

error: Content is protected !!