ಆರು ಜನರಿಗೋಸ್ಕರ ನಮ್ಮ ಭವಿಷ್ಯ ಹಾಳಾಗುತ್ತಿದೆ ಕಾಲೇಜು ಪ್ರಾರಂಭಿಸಿ- ವಿದ್ಯಾರ್ಥಿನಿ ಮನವಿ

ಉಡುಪಿ ಫೆ.14(ಉಡುಪಿ ಟೈಮ್ಸ್ ವರದಿ): ಇಂದು ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭಗೊಂಡಿರುವ ಹಿನ್ನೆಲೆ ಯಲ್ಲಿ ಹಿಜಾಬ್ ವಿವಾದದ ಬಿಸಿಯ ನಡುವಲ್ಲೇ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ.

ಉಡುಪಿಯ ಸರಕಾರಿ ಕಾಲೇಜಿನಲ್ಲಿ ಈ ಹಿಜಾಬ್ ವಿವಾದ ಆರಂಭಗೊಂಡಿರುವ ಕಾರಣ ಕಾಲೇಜು ಆವರಣದಲ್ಲಿ ಇಂದು ಬಿಗುವಿನ ವಾತಾರಣ ಕಂಡುಬಂದಿದೆ. ಇಂದು ಉಡುಪಿಯ ಸರಕಾರಿ ಬಾಲಕೀಯರ ಪದವಿ ಪೂರ್ವಕಾಲೇಜಿಗೆ ಹಾಜರಾದ ದ್ವಿತೀಯ ಪಿಯು ವಿದ್ಯಾರ್ಥಿನಿ ಶಿಲ್ಪಾ ಆಚಾರಿ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿ, ಈ ವಿವಾದ, ಗಲಾಟೆಗಳು ಆದಷ್ಟು ಬೇಗ ಅಂತ್ಯಗೊಂಡು‌ ಶಾಲೆ ಕಾಲೇಜುಗಳಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಪಾಠ ಕೇಳುವಂತಾಗಬೇಕು‌ ಎಂದು ಕಾಲೇಜಿಗೆ ಬಂದು ಮನವಿ ಮಾಡಿ ಮಾಧ್ಯಮ ಜೊತೆ ಮಾಡಿದ್ದಾಳೆ.

ಹಾಗೂ ಇದೇ ವೇಳೆ 6 ವಿದ್ಯಾರ್ಥಿಗಳ‌ ತಾಳಕ್ಕೆ ಕುಣಿದು ಇಡೀ ಕಾಲೇಜಿನ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಲು ಸಾಧ್ಯವಿಲ್ಲ ಎಂದ ವಿದ್ಯಾರ್ಥಿನಿ, ಫಸ್ಟ್ ಇಯರ್ ನಿಂದ ಹಿಜಾಬ್ ಹಾಕಿದ್ದೇವೆ ಅಂತಾರೆ. ಆದರೆ ಫಸ್ಟ್ ಇಯರ್ ನಲ್ಲಿ ಆನ್ಲೈನ್ ಕ್ಲಾಸ್ ಗಳು ನಡೆದಿರುವುದರಿಂದ ಯಾವುದೇ ಕ್ಲಾಸ್ ನಡೆದಿಲ್ಲ. ಆನ್ಲೈನ್ ಕ್ಲಾಸ್ ಆಗಿದ್ದ ಕಾರಣ 3 ತಿಂಗಳು ಮಾತ್ರ ಕ್ಲಾಸ್ ಇತ್ತು ಆಗೆಲ್ಲಾ ಅವರು ಹಿಜಾಬ್ ಹಾಕಿ ಬರುತ್ತಿರಲಿಲ್ಲ ಎಂದಿದ್ದಾರೆ.

ಇನ್ನು ಈ ಗಲಾಟೆ ಡಿಸೆಂಬರ್ ನಿಂದ ಆರಂಭವಾಗಿದ್ದು ಅದಕ್ಕೂ ಮೊದಲು ಕಾಲೇಜಿನಲ್ಲಿ ಉರ್ದು, ಬ್ಯಾರಿ ಭಾಷೆ ಮಾತನಾಡಲು‌ ಬಿಡುತ್ತಿಲ್ಲ ಎಂದು ನಮ್ಮ ಬಳಿ ಗಲಾಟೆ ಮಾಡುತ್ತಿದ್ದರು. ಕಾಲೇಜಿನಲ್ಲಿ ಯಾವುದೇ ಭಾಷೆಗೆ ಸಂಬಂಧಿಸಿ ಮಾತನಾಡಲು ಅಡ್ಡಿಪಡಿಸುತ್ತಿಲ್ಲ ಸುಮ್ಮನೆ ಸುಳ್ಳು ಸುದ್ದಿ ಮಾಡಬೇಡಿ ಎಂದಾಗ ಆ ವಿಚಾರ ಅಲ್ಲಿಗೇ ನಿಂತಿತ್ತು. ಆ ಬಳಿಕ ಡಿಸೆಂಬರ್ ವೇಳೆಗೆ ಹಿಜಾಬ್ ವಿಚಾರ ಆರಂಭಗೊಂಡಿತ್ತು ಎಂದು ವಿದ್ಯಾರ್ಥಿನಿ‌ ಹೇಳಿದ್ದಾರೆ.

ರಾಜ್ಯ ಹೈ ಕೋರ್ಟ್ ನ ಆದೇಶದಂತೆ ಇಂದು ನಗರದಲ್ಲಿ 9 ಮತ್ತು10 ನೇ ತರಗತಿಗಳು  ಆರಂಭಗೊಂಡಿದೆ. ಹಾಗೂ ನಗರದಲ್ಲಿ ಎಸ್ ಎಲ್.ಸಿ ಪೂರ್ವ ಸಿದ್ದತಾ ಪರೀಕ್ಷೆ ನಡೆಯುತ್ತಿದ್ದು ವಿದ್ಯಾರ್ಥಿಗಳು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಿಕೊಂಡು ಶಾಲೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.

ಈ ಬಗ್ಗೆ ಹೈಸ್ಕೂಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಅವರು, ಹೈಕೋರ್ಟ್ ಆದೇಶದಂತೆ ಜಿಲ್ಲೆಯಲ್ಲಿ ಇಂದು 9 ಮತ್ತು 10 ನೇ ತರಗತಿಗಳು ಆರಂಭಗೊಂಡಿದೆ. 10 ನೇ ತರಗತಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಹೈ ಕೋರ್ಟ್ ನಿಯಮಗಳನ್ನು ಪಾಲಿಸಿಕೊಂಡು ತರಗತಿಗೆ ಹಾಜರಾಗಿದ್ದಾರೆ. ಹಿಜಾಬ್ ಇಲ್ಲದೆ ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಿದರು.

ಕಾಲೇಜುಗಳನ್ನು ಶೀಘ್ರದಲ್ಲಿ ಪ್ರಾರಂಭಿಸುವಂತೆ ವಿದ್ಯಾರ್ಥಿಗಳು ನೀಡುತ್ತಿರುವ ಮನವಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿದ್ಯಾರ್ಥಿ ಗಳ ಮನವಿಯ ಬಗ್ಗೆ  ಹೈಕೋರ್ಟ್ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಆ ಬಳಿಕ ಪಿಯುಸಿ ಹಾಗೂ ಪದವಿ ಕಾಲೇಜುಗಳು ಆರಂಭಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಕಾಲೇಜುಗಳಲ್ಲಿ ಹೊಸದಾಗಿ ಯಾವುದೇ ನಿಯಮ ಜಾರಿ ಮಾಡಿಲ್ಲ.ಹೈಕೋರ್ಟ್ ಆದೇಶದಲ್ಲಿ ಸೂಚಿಸಿರುವ ನಿಯಮಗಳನ್ನು ಜಿಲ್ಲಾಡಳಿತ ಪಾಲನೆ ಮಾಡುತ್ತಿದೆ. ಸದ್ಯ ಯಾವುದೇ ಸಮಸ್ಯೆ ಇಲ್ಲದೆ ವಿದ್ಯಾರ್ಥಿಗಳು ಹೈಕೋರ್ಟ್ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಮುಂದಿನ ಹೈಕೋರ್ಟ್ ಆದೇಶದಂತೆ ಏನು ಕ್ರಮ‌ ಕೈಗೊಳ್ಳಬೇಕೋ ಅದನ್ನು ನಂತರದ ದಿನಗಳಲ್ಲಿ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.ಇನ್ನು ಎಲ್ಲೆಡೆ ಹೈಕೋರ್ಟ್ ನ ಆದೇಶವನ್ನು ಪಾಲನೆ ಮಾಡುತ್ತಿದೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಆವರಣದಲ್ಲಿ 200 ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದು, ಗುಂಪು ಸೇರುವುದು, 5 ಕ್ಕಿಂತ ಹೆಚ್ಚಿನ ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.  

Leave a Reply

Your email address will not be published. Required fields are marked *

error: Content is protected !!