ಉಡುಪಿ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ- ಬೃಹತ್ ರಕ್ತದಾನ ಶಿಬಿರ
ಉಡುಪಿ ಫೆ.13(ಉಡುಪಿ ಟೈಮ್ಸ್ ವರದಿ): ಡಾಕ್ಟರ್ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ಉಡುಪಿ ಜಿಲ್ಲೆ, ಯಶೋಧ ಆಟೋ ಯೂನಿಯನ್ ಉಡುಪಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಇಂದು ಬೆಳಿಗ್ಗೆ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿರುವ ಮಥುರಾ ಕಂಫರ್ಟ್ಸ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕುಂದಾಪುರದ ರೆಡ್ ಕ್ರಾಸ್ ಸೊಸೈಟಿ ಜಯಕರ ಶೆಟ್ಟಿ ಅವರು ಮಾತನಾಡಿ ರಕ್ತದಾನ ಮಾಡುವುದು ಉತ್ತಮ ಕಾರ್ಯ. ಎಲ್ಲೆಡೆ ರಕ್ತದ ಅಭಾವವಿರುವುದರಿಂದ ತುರ್ತು ಸಮಯದಲ್ಲಿ ರಕ್ತ ಸರಬರಾಜು ಮಾಡಿ ಜೀವ ಉಳಿಸುವ ಮಹತ್ಕಾರ್ಯ ನಡೆಯುತ್ತಲೇ ಇರಬೇಕು ಎಂದರು.
ಹಾಗೂ ಜೀವ ಉಳಿಸುವ ಇಂತಹ ಉತ್ತಮ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನಷ್ಟು ನಡೆಯುವಂತಾಗಲಿ ಎಂದ ಅವರು ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು, ಬಹಳಷ್ಟು ಜನರ ಸಹಾಯ, ಸಹಕಾರ ಪಡೆಯ ಬೇಕಾಗುತ್ತದೆ. ಹಾಗಾಗಿ ರಕ್ತದಾನ ಶಿಬಿರ ಅಯೋಜನೆ ಮಾಡಬೇಕೆಂದರೆ ತುಂಬಾ ಸವಾಲಿನ ಕೆಲಸ. ಆದರೂ ಕಳೆದ 32 ವರ್ಷಗಳಿಂದ ನಿರಂತರವಾಗಿ ರಕ್ತದಾನ ಮಾಡುತ್ತಿರುವ ಕೃಷ್ಣಮೂರ್ತಿ ಅವರ ಕಾರ್ಯ ಶ್ಲಾಘನೀಯ ಎಂದು ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಪ್ರಕಾಶ್ ಸೈಮಂಡ್, ಉಪನ್ಯಾಸಕ ಬಾಲಕೃಷ್ಣ ಮುದ್ದೋಡಿ, ಅಮೃತಾ ಕೃಷ್ಣಮೂರ್ತಿ, ಕಡೆಕಾರ್ ನವೀನ್ ಶೆಟ್ಟಿ, ಯುವರಾಜ್, ದಯಾನಂದ ಕಪ್ಪೆಟ್ಟು, ಸತೀಶ್ ಮಣಿಪಾಲ, ಸೌರಭ್ ಬಲ್ಲಾಳ್, ಉದಯ್, ಚರಣ್ ಬಂಗೇರ ಉಪಸ್ಥಿತರಿದ್ದರು. ನೂರಾರು ಮಂದಿ ರಕ್ತದಾನಿಗಳು ಶಿಬಿರದಲ್ಲಿ ಭಾಗವಹಿಸಿದರು. ಈ ಶಿಬಿರದ ವಿಶೇಷತೆಯೆಂದರೆ ರಕ್ತದಾನ ಮಾಡಿದ ದಾನಿಗಳಿಗೆ ಎರಡು ಲಕ್ಷವರೆಗಿನ ಅವಘಡದ ವಿಮೆ ಹಾಗೂ 1 ಲಕ್ಷದವರೆಗಿನ ಮೆಡಿಕಲ್ ವಿಮೆಯ ಸೌಲಭ್ಯ ದೊರೆಯಲಿದೆ.