ಪ್ರಧಾನಿ ಮೋದಿ ಸರ್ಕಾರ ‘ಲೂಟಿ ಮಾಡು ಮತ್ತು ಪರಾರಿಯಾಗು’ ಯೋಜನೆ – ಕಾಂಗ್ರೆಸ್
ನವದೆಹಲಿ: ಬ್ಯಾಂಕ್‌ಗಳಿಗೆ ವಂಚನೆ ಮಾಡುವವರಿಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ಲೂಟಿ ಮಾಡು ಮತ್ತು ಪರಾರಿಯಾಗು’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ಭಾನುವಾರ ಟೀಕಿಸಿದೆ.
ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ₹ 22,842 ಕೋಟಿ ಮೊತ್ತದ ವಂಚನೆ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್, ಅದರ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಶಿ ಕಮಲೇಶ್ ಅಗರ್ವಾಲ್ ಸೇರಿದಂತೆ ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
‘ಈ ಹಗರಣ ಕುರಿತು 2018ರಲ್ಲಿಯೇ ದೂರು ನೀಡಲಾಗಿದ್ದರೂ, ಪ್ರಕರಣ ದಾಖಲಿಸಲು ಐದು ವರ್ಷಗಳಷ್ಟು ವಿಳಂಬ ಯಾಕಾಯಿತು’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಬಿಜೆಪಿ ಸಂಸದ ವರುಣ್ ಗಾಂಧಿ, ‘ಕೋಟ್ಯಂತರ ರೂಪಾಯಿ ವಂಚಿಸುವವರು ಸುಲಭವಾಗಿ ಜಾಮೀನು ಪಡೆದುಕೊಳ್ಳುತ್ತಾರೆ. ಬಡ ರೈತರು ಹಾಗೂ ಸಣ್ಣ ವರ್ತಕರು ಇದಕ್ಕೆ ಬೆಲೆ ತೆರುತ್ತಾರೆ’ ಎಂದು ಟೀಕಿಸಿದ್ದಾರೆ.”