ಉಡುಪಿ: ಹೆಚ್ಚಿದ ಕೊರೋನಾ ಸೋಂಕು, ಕಾಂಗ್ರೆಸ್ ನಿಯೋಗ ಜಿಲ್ಲಾಧಿಕಾರಿಗಳ ಭೇಟಿ

ಉಡುಪಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರ ನೇತೃತ್ವದಲ್ಲಿ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್-೧೯ ಮಹಾಮಾರಿಯು ತೀವ್ರವಾಗಿ ಹರಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಗಮನಹರಿಸಬೇಕಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಿತು.

ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗಾಗಿ ಶೇಕಡಾ 50 ರಷ್ಟು ಬೆಡ್‌ಗಳನ್ನು ಕಾದಿರಿಸಬೇಕೆಂದು ಸರಕಾರವು ಆದೇಶಿಸಿದ್ದರೂ ಉಡುಪಿ ಜಿಲ್ಲೆಯಲ್ಲಿ ಈ ಆದೇಶ ಇನ್ನೂ ಪಾಲನೆ ಆಗಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ ಕಂಡು ಬಂದಿದೆ ಆದ್ದರಿಂದ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಶೇಕಡಾ ಐವತ್ತರಷ್ಟು ಬೆಡ್‌ಗಳನ್ನು ಸೋಂಕಿತರಿಗೆ ಕಾದಿರಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳು ವಿಧಿಸುವ ಶುಲ್ಕ ಜನಸಾಮಾನ್ಯರ ಕೈಗೆಟಕುವಂತಿರಬೇಕು ಎಂಬ ಸಲಹೆ ಉಡುಪಿ ಜಿಲ್ಲಾ ಕಾಂಗ್ರೆಸ್ ನೀಡಿದೆ.


ಮಳೆಗಾಲದ ಈ ದಿನಗಳಲ್ಲಿ ಸಾಮಾನ್ಯವಾಗಿ ಬರುವ ಶೀತ, ನೆಗಡಿಗಳನ್ನೇ ವೈರಸ್ ಎಂದು ಪರಿಗಣಿಸದೆ ಕುಟುಂಬ ಯಾ ಸ್ಥಳೀಯ ವೈದ್ಯರಿಗೆ ತಪಾಸಣೆಗೆ ಅವಕಾಶ ಮಾಡಿಕೊಟ್ಟು ರೋಗ ನಿರೋಧಕ ಮದ್ದುಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಬೇಕು. ಆ ಮೂಲಕ ಜನರು ಭಯಭೀತರಾಗಿ ಮಾನಸಿಕ ಅಸಮತೋಲನಕ್ಕೆ ಒಳಗಾಗುವುದನ್ನು ತಪ್ಪಿಸಬೇಕು ಎಂಬ ಸಲಹೆ ನೀಡಿತು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ನಾಳೆನ ನಡೆಯಲಿರುವ ವೈದ್ಯರ ಸಭೆಯಲ್ಲಿ ಈ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.


ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು.ಆರ್. ಸಭಾಪತಿ, ಕೆಪಿಸಿಸಿ ಮುಖಂಡರಾದ ಮುರಳಿ ಶೆಟ್ಟಿ, ಎಂ.ಎ. ಗಫೂರ್, ವೆರೋನಿಕಾ ಕರ್ನೆಲಿಯೋ, ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ನೀರೇ ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ, ವೈ ಸುಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!