ಬೆಂಗಳೂರಿಗೂ ಕಾಲಿಟ್ಟ ಹಿಜಾಬ್ ವಿವಾದ: ಶಾಲೆಯೊಂದರ ಮುಂದೆ ಹೈಡ್ರಾಮಾ!
ಬೆಂಗಳೂರು: ಹಿಜಾಬ್ ವಿವಾದ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಇಷ್ಟು ದಿನ ಈ ವಿವಾದದಲ್ಲಿ ಬೆಂಗಳೂರು ನಗರ ದೂರವುಳಿದಿತ್ತು.
ವಿದ್ಯಾಸಾಗರ್ ಪಬ್ಲಿಕ್ ಸ್ಕೂಲ್ ಬಳಿ ವಿದ್ಯಾರ್ಥಿಗಳ ಜೊತೆಗೆ ಪೋಷಕರು ದೌಡಾಯಿಸಿದ್ದು, ಶಾಲೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ಚಂದ್ರ ಲೇಔಟ್‌ನಲ್ಲಿರುವ ವಿದ್ಯಾಸಾಗರ್ ಪಬ್ಲಿಕ್ ಶಾಲೆ ಬಳಿ ಬಂದ ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ಮತ್ತು ಪೋಷಕರ ನಡುವಿನ ವಾಗ್ವಾದದಿಂದ ಮತ್ತಷ್ಟು ಗೊಂದಲ ಸೃಷ್ಟಿಯಾಗಿದ್ದು, ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ.
ಹಿಜಾಬ್ ಧರಿಸದಂತೆ ವಿದ್ಯಾರ್ಥಿಗಳ ಎದುರು ಬೋರ್ಡ್ ಮೇಲೆ ಬರೆದಿದ್ದಾರೆ ಎಂದು ಆರೋಪಿಸಲಾದ ಶಿಕ್ಷಕಿ ಜೊತೆಗೆ ಶಿಕ್ಷಣಾಧಿಕಾರಿ ಬೈಲಾಂಜನಪ್ಪ ಚರ್ಚೆ ನಡೆಸಿದ್ದಾರೆ. ಶಿಕ್ಷಕಿ ಶಶಿಕಲಾ ಬಳಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಶಾಲೆಯಲ್ಲಿ ಪಾಠವನ್ನು ಬಿಟ್ಟು ಬೇರೆ ಯಾವ ವಿಷಯದ ಬಗ್ಗೆ ಪ್ರಸ್ತಾಪಿಸಿಲ್ಲ. ಹಿಜಾಬ್ ವಿವಾದದ ಬಗ್ಗೆ ತರಗತಿಯಲ್ಲಿ ಮಾತನಾಡಿಲ್ಲ ಎಂಬುದಾಗಿ ಶಿಕ್ಷಕಿ ತಿಳಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜನಪ್ಪ ಸ್ಪಷ್ಟನೆ ನೀಡಿದ್ದಾರೆ.
ಹೈಕೋರ್ಟ್ ಆದೇಶಕ್ಕೆ ಡೋಂಟ್ ಕೇರ್: ಹಿಜಾಬ್ ವಿವಾದ ಸದ್ಯ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಮೊನ್ನೆ ಮಧ್ಯಂತರ ಆದೇಶ ಹೊರಡಿಸಿದ್ದ ಹೈಕೋರ್ಟ್ ಮುಂದಿನ ಆದೇಶದವರೆಗೆ ಯಾವ ಮಕ್ಕಳೂ ಶಾಲಾ-ಕಾಲೇಜುಗಳಿಗೆ ಧಾರ್ಮಿಕ ಗುರುತು ಹೊಂದಿರುವ ಬಟ್ಟೆಗಳನ್ನು ಧರಿಸಿಕೊಂಡು ಹೋಗಬಾರದು, ಕೇವಲ ಸಮವಸ್ತ್ರ ಮಾತ್ರ ಧರಿಸಿಕೊಂಡು ಹೋಗಬೇಕು ಎಂದು ಮಧ್ಯಂತರ ಆದೇಶ ನೀಡಿತ್ತು. ಆದರೆ ನ್ಯಾಯಾಲಯ ಆದೇಶಕ್ಕೂ ಜನರು ಡೋಂಟ್ ಕೇರ್ ಅನ್ನುವಂತಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಬಾಗಲಕೋಟೆಯ ಶಾಲೆಯೊಂದರಲ್ಲಿ ಪ್ರಾಥಮಿಕ ತರಗತಿಯಲ್ಲಿ ಓದುತ್ತಿರುವ ಮಕ್ಕಳು ನಮಾಜ್ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ.