ಹಿಜಾಬ್ ವಿವಾದ: ಮತೀಯ ಸಂಘಟನೆಯಲ್ಲಿದ್ದಾರೆ ಕೆಲವು ಮಕ್ಕಳ ಪೋಷಕರು- ಗೃಹ ಸಚಿವ ಆರಗ

ಬೆಂಗಳೂರು: ಸೋಮವಾರದಿಂದ 10 ನೇ ತರಗತಿಯವರೆಗೂ ಶಾಲೆಗಳು ಆರಂಭವಾಗುತ್ತದೆ. ಸಾಮಾಜಿಕ ಜಾಲಾತಾಣದಲ್ಲಿ ಪ್ರಚೋದನಾಕಾರಿ ಸಂದೇಶ, ವಿಡಿಯೋ ಹರಿದಾಡದಂತೆ ಕಟ್ಟೆಚ್ಚರ ವಹಿಸಬೇಕಿದ್ದು, ಹೈಕೋರ್ಟ್ ಆದೇಶ ಪಾಲಿಸಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿ ಅವರು, ಸಮಾಜಘಾತುಕ ಶಕ್ತಿಗಳನ್ನು ಗುರುತಿಸಬೇಕು. ಮೇಲಿನ ಆದೇಶಕ್ಕೆ ಕಾಯದೇ ತಕ್ಷಣದ ಕ್ರಮ ಪಾಲಿಸಲು ಆಡಳಿತಕ್ಕೆ ಆದೇಶ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸದಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಶಾಲೆಗಳಿಗೆ ಎಸ್ ಪಿ ಭೇಟಿ ನೀಡಬೇಕು. ಪೋಷಕರು,ಶಾಲಾ ಆಡಳಿತ ಮಂಡಳಿ ಜೊತೆ ಜಿಲ್ಲಾಧಿಕಾರಿಗಳು ನಿರಂತರ ಸಭೆ ನಡೆಸಬೇಕು. ಶಾಂತಿಪಾಲನ ಸಭೆ ನಡೆಸಬೇಕು. ಸಣ್ಣ ಘಟನೆಯನ್ನೂ ಗಂಭೀರವಾಗಿ ಪರಿಗಣಿಸಬೇಕು. ಆದ್ಯತೆಯ ಮೇರೆಗೆ ಕಾನೂನು ಕಾಪಾಡಿಕೊಂಡು ಹೋಗಬೇಕು. ಹೊರಗಿನ ಶಕ್ತಿಗಳಿಗೆ ಅವಕಾಶ ಕೊಡಬಾರದು ಎಂದು ತಿಳಿಸಿದರು.

ರಾಜಕೀಯ ಪಕ್ಷಗಳು,ಧಾರ್ಮಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಸಭೆ ನಡೆಸಬೇಕು. ಮಾಧ್ಯಮಗಳು ವಸ್ತುಸ್ಥಿತಿಯನ್ನು ವಿವರಿಸುವ ಕೆಲಸ ಮಾಡಬೇಕು ಎಂದ ಅವರು ಮಂಡ್ಯ ಯುವತಿಗೆ ಮಹಾರಾಷ್ಟ್ರ ಶಾಸಕ ಉಡುಗೊರೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದರು.  ಈ ಬಗ್ಗೆ ಗಮನಿಸುತ್ತಿದ್ದೇವೆ. ಮಂಡ್ಯದ ಯುವತಿ ಮಾತ್ರವಲ್ಲ. ರಾಜ್ಯದ ಕೆಲವು ಮಕ್ಕಳ ಪೋಷಕರು ಮತೀಯ ಸಂಘಟನೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ. ಆ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದರು.

ಸಭೆಯಲ್ಲಿ ಸಚಿವರಾದ ಬಿ.ಸಿ. ನಾಗೇಶ್, ಅಶ್ವತ್ಥ ನಾರಯಣ್, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಯ  ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!