ಹಿಜಾಬ್ ಕೇಸರಿ ಗಲಭೆಯ ಹಿಂದೆ ದೇಶವನ್ನೇ ಕೇಸರಿಕರಣಗೊಳಿಸುವ ಗುಪ್ತ ಕಾರ್ಯಸೂಚಿ – ಕಾಂಗ್ರೆಸ್
ಉಡುಪಿ: ವಿವಿಧತೆಯಲ್ಲಿ ಏಕತೆಯ ಸಾಂವಿದಾನಿಕ ಸತ್ಯದಡಿಯಲ್ಲಿ ಸೌಹಾರ್ಧಯುತವಾಗಿ ಬಗೆಹರಿಸ ಬಹುದಾಗಿದ್ದ ಹಿಜಾಬ್ ಕೇಸರಿ ಅನಗತ್ಯ ಸಂಘರ್ಷವನ್ನು ರಾಜ್ಯದ ಬಿಜೆಪಿ ಸರಕಾರ ರಾಜಕೀಯವಾಗಿ ಬಳಸಿಕೊಳ್ಳುವ ವ್ಯರ್ಥ ಗುರಿಯೊಂದಿಗೆ ಮುಗ್ದ ವಿದ್ಯಾರ್ಥಿಗಳ ಭವಿ?ತ್ತಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳುಸಿದ್ದಾರೆ.
ಚುನಾವಣೆ ಬಂದಾಗ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಧರ್ಮದ ಹೆಸರಲ್ಲಿ ಮತ ವಿಭಜನೆಗೆ ಹೊಸ ದಾರಿ ಹುಡುಕುವುದು ಬಿಜೆಪಿಯ ಛಾಳಿಯಾಗಿದೆ. ಅಷ್ಟಕ್ಕೂ ಮುಸ್ಲಿಂ ಹೆಣ್ಣುಮಕ್ಕಳು ಅವರವರ ಇಚ್ಚೆಗನುಸಾರ ವಾಗಿ ತರಗತಿಗಳಲ್ಲಿ ಹಿಜಾಬ್ ಧರಿಸುವುದು ಹೊಸತೇನಲ್ಲ. ಇದು ಅವರ ಸಂವಿಧಾನದತ್ತ ಹಕ್ಕು. ಅದನ್ನು ಪ್ರಶ್ನಿಸುವ ಅಧಿಕಾರ ಒಂದು ಸರಕಾರಕ್ಕಾಗಲಿ, ಶಾಲಾ ಮುಖ್ಯಸ್ಥರಿಗಾಗಲಿ, ಶಾಲಾಭಿವೃದ್ದಿ ಸಮಿತಿಗಾಗಲಿ ಇಲ್ಲ. ಆದರೆ ಕೆಲವೊಂದು ರಾಜಕೀಯ ಪ್ರೇರಿತ ಮೂಲಭೂತವಾದಿ ಮನಸ್ಥಿತಿಯ ಸಮಾಜಘಾತುಕ ಶಕ್ತಿಗಳು ಕೇಸರಿಯನ್ನು ಶಾಲಾ ಅಂಗಣಕ್ಕೆ ಎಳೆದು ತಂದು ಮುಗ್ದ ಮಕ್ಕಳ ಮನಸ್ಸಿಗೆ ಕಿಡಿಹಚ್ಚಿದುದರ ಪರಿಣಾಮವಾಗಿ ಇಂದು ದೇಶದಲ್ಲಿ ಒಂದು ಅರ್ಥದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರುವಂತಾಗಿದೆ. ಇದಕ್ಕೆ ಆಳುವ ಸರಕಾರವೇ ನೇರ ಹೊಣೆ ಎಂದು ಅವರು ಹೇಳಿದ್ದಾರೆ.
ಈ ಹಿಜಾಬ್ ಕೇಸರಿ ಗಲಭೆಯ ಹಿಂದೆ ದೇಶವನ್ನೇ ಕೇಸರಿಕರಣಗೊಳಿಸುವ ಗುಪ್ತ ಕಾರ್ಯಸೂಚಿ ಅಡಗಿದೆ. ಇದಕ್ಕೆ ಬಿಜೆಪಿ ನಾಯಕ ಈಶ್ವರಪ್ಪನವರ ಹೇಳಿಕೆಯೇ ಸಾಕ್ಷಿಯಾಗಿದೆ. ಈ ಬಗ್ಗೆ ಎರಡೂ ಧರ್ಮಗಳ ಮಕ್ಕಳ ಹೆತ್ತವರು ಜಾಗೃತರಾಗಬೇಕು. ತಮ್ಮ ಮಕ್ಕಳ ಭವಿಷ್ಯಗಿಂತ ಕೇಸರಿ ಮತ್ತು ಹಿಜಾಬ್ ಮೇಲಲ್ಲ ಎಂಬ ಸತ್ಯವನ್ನು ಅರ್ಥಮಾಡಿ ಕೊಂಡು ದೇಶದ ಸಾಂವಿಧಾನಿಕ ಸಮಗ್ರತೆ ಮತ್ತು ಸಾರ್ವಭೌಮತೆಯೊಂದಿಗೆ ರಾಜಿಮಾಡಿಕೊಳ್ಳ ಬೇಕಾದುದು ಇಂದಿನ ಆಧ್ಯತೆ ಆಗಿದೆ ಎಂದು ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.