| ಬೆಂಗಳೂರು, ಫೆ.11: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ನಿನ್ನೆ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಹಾಗೂ ಮೊಹಮ್ಮದ್ ನಲಪಾಡ್ ವಿರುದ್ದ ಬಿಜೆಪಿ ಟ್ವೀಟ್ ಮೂಲಕ ಟೀಕೆ ಮಾಡಿದೆ.
ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿರುವ ಬಿಜೆಪಿ, ಒಮ್ಮೆ ತಲೆ ಕಡಿಯುತ್ತೇನೆ ಎನ್ನುತ್ತಾರೆ, ಮತ್ತೊಬ್ಬರ ಕಾಲು ಮುರಿಯುತ್ತಾರೆ, ಮಗದೊಮ್ಮೆ ಅಮಾಯಕರ ಗುರುತು ಸಿಗದಂತೆ ಮುಖ ಜಜ್ಜುತ್ತಾರೆ. ಅದೇ ವ್ಯಕ್ತಿ ಈಗ ಯುವ ಕಾಂಗ್ರೆಸ್ ಅಧ್ಯಕ್ಷ, ಇದು ಯುವ ಕಾಂಗ್ರೆಸ್ಸೋ ಅಥವಾ ರೌಡಿ ಕಾಂಗ್ರೆಸ್ಸೋ!? ಎಂದು ವ್ಯಂಗ್ಯವಾಡಿದೆ.
ಮಹಮ್ಮದ್ ನಲಪಾಡ್ ಅವರನ್ನು ರೌಡಿ ಚಟುವಟಿಕೆಯ ಕಾರಣಕ್ಕಾಗಿ 2018 ರಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲಕ್ಕೆ ಕೆಪಿಸಿಸಿ ಅಧ್ಯಕ್ಷರು ಉಚ್ಚಾಟನೆ ಮಾಡಿದ್ದರು. ಅದೇ ನಲಪಾಡ್ ಕೇವಲ 4 ವರ್ಷಗಳಲ್ಲಿ ಯುವಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆ. ಎಂತಹ ವೈಚಿತ್ರ್ಯವಿದು!? ಎಂದು ಕರೆದು ಕೊಂಡಿದೆ.
ದೇಶಕ್ಕೆ ಕಾಂಗ್ರೆಸ್ ಪಕ್ಷ ಯಾವ ಸಂದೇಶ ನೀಡುತ್ತಿದೆ!? ಗುರುವಿಗೆ ತಕ್ಕ ಶಿಷ್ಯ.ಕೆಪಿಸಿಸಿ ಅಧ್ಯಕ್ಷರಿಗೆ ಕೊತ್ವಾಲ್ ಗ್ಯಾಂಗ್ ಶ್ರೀರಕ್ಷೆಯಿತ್ತು. ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಿಗೆ ಬಿಟ್ ಕಾಯಿನ್ ಗ್ಯಾಂಗ್ ನಂಟು ಎಂದು ಟೀಕಿಸಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಆತನ ಸಾಧನೆಗಳೆಂದರೆ IPC section 307 ( ಕೊಲೆ ಯತ್ನ) IPC 341 (ಸಂಯಮ ಮೀರಿದ ವರ್ತನೆ) IPC 506 (ಕ್ರಿಮಿನಲ್ ಬೆದರಿಕೆ) IPC 143 and 144 (ಅಕ್ರಮ ಗುಂಪು ಗೂಡುವುದು). ಹೀಗಾಗಿ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ಇದೇ ಅರ್ಹತೆಯೇ ಎಂದು ಪ್ರಶ್ನಿಸಿದೆ. | |