ಪೂರ್ಣಗೊಂಡಿರುವ ಕಾಮಗಾರಿಗೆ ಮತ್ತೆ ಟೆಂಡರ್-ಉಡುಪಿ ನಗರಸಭೆಯ ವಿರುದ್ಧ ಜಿಲ್ಲಾಧಿಕಾರಿಗೆ ಕಾಂಗ್ರೆಸ್ ದೂರು
ಉಡುಪಿ ಫೆ.10: ಈಗಾಗಲೇ ಸಂಪೂರ್ಣಗೊಂಡಿರುವ ರೂ.15 ಲಕ್ಷ ಮಿಕ್ಕಿದ ಸಾರ್ವಜನಿಕ ಕಾಮಗಾರಿಗೆ ಉಡುಪಿ ನಗರಸಭೆಯು ಮತ್ತೊಮ್ಮೆ ಕರೆದಿರುವ ಟೆಂಡರ್ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ, ಈ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಯವರಿಗೆ ಮನವಿ ಸಲ್ಲಿಸಲಾಯಿತು.
ಈ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಮನವಿ ಸಲ್ಲಿಸಿದ್ದು, ಈ ಮನವಿಯಲ್ಲಿ ಉಡುಪಿ ನಗರಸಭೆಯು ಟೆಂಡರ್ ಪ್ರಕಟಣೆ ಸಂಖ್ಯೆ: ಉನಸ ಬಿ.2 ಟೆಂ.ಪ್ರ:17:ಸಿಆರ್ 2021-22 ಜ.29 ರಂತೆ 17ಕಾಮಗಾರಿಗಳನ್ನು ನಿರ್ವಹಿಸಲು ಟೆಂಡರ್ ಪ್ರಕಟಣೆ ನೀಡಿರುತ್ತದೆ. ಆದರೆ ಈ ಕಾಮಗಾರಿಗಳ ಪೈಕಿ ಕುಂಜಿಬೆಟ್ಟು ಶಾರದ ನಗರ ರಸ್ತೆಯಿಂದ ಸೇತುವೆ ತನಕ ರೂ. 15 ಲಕ್ಷ ಮೊತ್ತದ ರಸ್ತೆ ಡಾಮಾರೀಕರಣ ಕಾಮಗಾರಿಯನ್ನು ಈಗಾಗಲೇ ನಿರ್ವಹಿಸಲಾಗಿದೆ. ಈ ಕಾಮಗಾರಿ ಮಾತ್ರವಲ್ಲದೇ ಇನ್ನೂ ಅನೇಕ ಕಾಮಗಾರಿಗಳನ್ನು ಸರಕಾರದ ಕಾನೂನು ನಿಯಮಗಳು ಸುತ್ತೋಲೆಗಳನ್ನು ಗಾಳಿಗೆ ತೂರಿ ಈಗಾಗಲೇ ಪೂರ್ಣಗೊಳಿಸಿದೆ. ಈ ಟೆಂಡರ್ ಫೆ. 15 ರOದು ತೆರೆಯಲಿದ್ದು, ಅದರ ಮೊದಲೇ ಟೆಂಡರ್ ಪ್ರಕ್ರಿಯೆಯ ನಿಯಮವನ್ನು ಉಲ್ಲಂಘನೆ ಮಾಡಿ ಕಾಮಗಾರಿ ಪೂರ್ತಿಗೊಂಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕಾಮಗಾರಿಯಲ್ಲಿ ಇನ್ನೇನು ಕೆಲಸಗಳು ಬಾಕಿ ಇಲ್ಲದಿದ್ದರೂ ಈಗಾಗಲೇ ನಿರ್ವಹಿಸಿರುವ ಕಾಮಗಾರಿಗೆ ಟೆಂಡರ್ ಆಹ್ವಾನಿಸುವುದು ಕಾನೂನು ಬಾಹಿರವಾಗಿದ್ದು, ಅವ್ಯವಹಾರ ಹಾಗೂ ಅಕ್ರಮ ಎನಿಸುತ್ತದೆ. ಹಾಗೂ ಈ ಟೆಂಡರ್, ಪ್ರಕಟಣೆಗಳನ್ನು ನೀಡುವಲ್ಲಿನ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ಈ ರೀತಿ ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಪೌರಾಡಳಿ ನಿರ್ದೇಶಕರು ಹಾಗೂ ಸರಕಾರದ ಕಾರ್ಯದರ್ಶಿ ಗಳು ಹೊರಡಿಸಿರುವ ಸುತ್ತೋಲೆಗಳಲ್ಲಿ ಸ್ಪಷ್ಟಪಡಿಸಿದ್ದರೂ, ಅದನ್ನು ಕಡೆಗಣಿಸಿ, ಉಡುಪಿ ನಗರಸಭೆಯ ಪೌರಾಯುಕ್ತರು ಹಾಗೂ ಅಧಿಕಾರಿಗಳು ನಗರಸಭೆಯ ಆಡಳಿತ ಪಕ್ಷದ ಸದಸ್ಯರೊಂದಿಗೆ ಶಾಮಿಲಾಗಿ ಈ ಬೃಹತ್ ಅವ್ಯವಹಾರವನ್ನು ನಡೆಸಿರುವುದು ಕಂಡು ಬರುತ್ತದೆ.
ನಗರಸಭೆಯ ಆಡಳಿತ ಪಕ್ಷದ ಸದಸ್ಯರು ತಮ್ಮ ಅಪ್ತ ಗುತ್ತಿಗೆದಾರರ ಮೂಲಕ ಕಾಮಗಾರಿಗಳನ್ನು ಈಗಾಗಲೇ ಅನಧಿಕೃತವಾಗಿ ನಿರ್ವಹಿಸಿದ್ದು, ಈ ಪ್ರಕರಣದಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಈ ಟೆಂಡರು ಪ್ರಕಟಣೆ ಗಳಲ್ಲಿ ನೀಡಿರುವ ಪ್ರತಿಯೊಂದು ಕಾಮಗಾರಿಯನ್ನು ಪರಿಶೀಲಿಸಿ ಈಗಾಗಲೇ ನಿರ್ವಹಿಸಿರುವ ಕಾಮಗಾರಿಗಳನ್ನು ಕೈಬಿಡುವುದು ತೀರಾ ಅವಶ್ಯಕವಾಗಿರುತ್ತದೆ. ಆದ್ದರಿಂದ, ಈ ಟೆಂಡರು ಪ್ರಕಟಣೆಗಳಿಗೆ ಸಂಬಂಧಿಸಿದ ಮುಂದಿನ ಟೆಂಡರು ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿಕೊಳ್ಳಲಾಗಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಗರ ಸಭಾ ವಿಪಕ್ಷ ನಾಯಕ ರಮೇಶ್ ಕಾಂಚನ್, ದೂರುದಾರರಾದ ಯತೀಶ್ ಕರ್ಕೇರಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ನಗರ ಸಭೆಯ ಮಾಜಿ ಉಪಾಧ್ಯಕ್ಷ ಕುಶಾಲ್ ಶೆಟ್ಟಿ, ಅಮೃತ್ ಶೆಣೈ, ಜ್ಯೋತಿ ಹೆಬ್ಬಾರ್, ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಶಶಿರಾಜ್ ಕುಂದರ್ ಉಪಸ್ಥಿತರಿದ್ದರು.