| ಬೆಂಗಳೂರು ಫೆ. 10: ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಪ್ರಕರಣದ ಅಂತಿಮ ವಿಚಾರಣೆ ಮುಗಿಯುವವರೆಗೆ ಧಾರ್ಮಿಕ ಗುರುತು ಬಳಸಬಾರದು ಎಂದು ಹೈಕೋರ್ಟ್ ನ ಮುಖ್ಯ ಮೂರ್ತಿಗಳನ್ನೊಳಗೊಂಡ ತ್ರೀಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.
ಪ್ರಕರಣದ ವಿಚಾರಣೆ ವೇಳೆ ತೀರ್ಪು ಬರುವವರೆಗೆ ಹಿಜಾಬ್ ಧರಿಸಲು ಮಧ್ಯಂತರ ಆದೇಶ ಕೋರಿ ಅರ್ಜಿದಾರರ ವಕೀಲರು ಹೈಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು. ಆದರೆ ವಿಚಾರಣೆಯ ವಾದ ವಿವಾದ ಆಲಿಸಿದ ವಿಸ್ತ್ರತ ಪೀಠ ರಾಜ್ಯದ ದಲ್ಲಿ ಶಾಂತಿ ಸುವ್ಯವಸ್ಥೆ ಮರಳಬೇಕಿದೆ. ಹಾಗಾಗಿ ಪ್ರಕರಣದ ವಿಚಾರಣೆ ಮುಗಿವವ ವರೆಗೆ ಧಾರ್ಮಿಕ ಗುರುತುಗಳನ್ನು ಬಳಸಬಾರು. ಈ ಮೂಲಕ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ತೆರಳಬೇಕು. ಆದರೆ ಶಾಲೆಗಳಲ್ಲಿ ಧಾರ್ಮಿಕ ಗುರುತುಗಳಾದ ಶಾಲು, ಹಿಜಾಬ್ ಧರಿಸುವಂತಿಲ್ಲ ಎಂದು ಪೀಠ ಮಧ್ಯಂತರ ಆದೇಶ ನೀಡಿದೆ.
ಸಿ.ಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾ.ಜೈಬುನ್ನೀಸಾ ಮೊಹಿದ್ದೀನ್ ಅವರನ್ನೊಳ ಗೊಂಡ ತ್ರೀ ಸದಸ್ಯ ಪೀಠವು ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದು, ದಿನ ಈ ಬಗ್ಗೆ ವಿಚಾರಣೆ ನಡೆದುವುದಾಗಿ ತಿಳಿಸಿ, ಶೀಘ್ರವಾಗಿ ಅಂತಿಮ ತೀರ್ಪು ನೀಡುವುದಾಗಿ ತಿಳಿಸಿದರು. ಪ್ರಕರಣದ ಕುರಿತು ಸುಧೀರ್ಘ ವಿಚಾರಣೆ ನಡೆಸುವ ಅಗತ್ಯವಿರುವುದರಿಂದ ನಿನ್ನೆ ಹೈಕೋರ್ಟ್ ನ ಏಕ ಸದಸ್ಯ ಪೀಠದ ನ್ಯಾಯ ಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ವಿಸ್ತ್ರತ ಪೀಠಕ್ಕೆ ಪ್ರಕರಣ ವರ್ಗಾಯಿಸಿದರು. ಅದರಂತೆ ಇಂದು ಹೈಕೋರ್ಟ್ ನ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾ. ಜೈಬುನ್ನೀಸಾ ಮೊಹಿದ್ದೀನ್ ಅವರನ್ನೊಳಗೊಂಡ ತ್ರೀ ಸದಸ್ಯ ಪೀಠದಲ್ಲಿ ಪ್ರಕರಣದ 3ನೇ ದಿನದ ವಿಚಾರಣೆ ನಡೆಯಿತು.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಅರ್ಜಿದಾರರ ಪರ ದೇವದತ್ ಕಾಮತ್, ಮಹಮ್ಮದ್ ತಾಹಿರ್,ಸಂಜಯ್ ಹೆಗ್ಡ ವಾದ ಮಂಡಿಸಿದರು. ಸರಕಾರದ ಪರವಾಗಿ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿದರು. ಅರ್ಜಿದಾರರ ಪರ ವಕೀಲರು ವಾದ ಮಂಡಿಸುವ ವೇಳೆ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದ ಹಿನ್ನೆಲೆ ತಿಳಿಸಿ ವಾದ ಮಂಡಿಸಿ ಎಂದು ಸೂಚನೆ ನೀಡಿದರು. ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದ ಮಂಡಿಸುತ್ತಿದ್ದ ವೇಳೆ ನೀವು ಮಧ್ಯಂತರ ತೀರ್ಪಿಗಾಗಿ ವಾದ ಮಂಡಿಸುತ್ತಿದ್ದಿರೋ ಅಥವಾ ಅಂತಿಮ ತೀರ್ಪಿಗೆ ವಾದ ಮಂಡಿಸುತ್ತಿದ್ದಿರೋ ಎಂದು ಸಿಜೆ ಪ್ರಶ್ನಿಸಿದರು. ಆಗ ಅಡ್ವಕೇಟ್ ಜನರ್ಲ್ ಪ್ರಭುಲಿಂಗ ನಾವದಗಿ ಅವರು, ಮಧ್ಯಂತರ ತೀರ್ಪು ಗಿಂತ ಅಂತಿಮ ತೀರ್ಪು ಶೀಘ್ರವಾಗಿ ನೀಡಬೇಕು ಎಂದು ಮನವಿ ಮಾಡಿಕೊಂಡರು. ಹಾಗೂ ಶಾಲೆ ಆರಂಭಿಸಲು ಸಿದ್ದರಿದ್ದೇವೆ ಆದರೆ ಒಬ್ಬರು ಹಿಜಾಬ್ ಮತ್ತೊಬ್ಬರು ಕೇಸರಿ ಶಾಲು ಧರಿಸಿ ಬರುತ್ತಾರೆ. ಹೀಗಾಗಿ ಶಾಲೆ ಆರಂಬಿಸುವುದು ಬಹಳ ಕಷ್ಟ ವಾಗಿದೆ. ಹಾಗಾಗಿ ಶಾಲಾ ವಸ್ತ್ರ ಸಂಹಿತೆ ಗೆ ಬದ್ದರಾಗಿರಬೇಕು ಎಂದು ತಿಳಿಸಿದರು.
ಇದೇ ವೇಳೆ ವಕೀಲರಾದ ದೇವದತ್ ಕಾಮತ್ ಅವರು ವಾದ ಮಂಡಿಸಿ, ಕಾಲೇಜು ಅಭಿವೃದ್ಧಿ ಸಮಿತಿ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಮಾಡುತ್ತಿದೆ, ಸರಕಾರ ಬೆಂಕಿ ಜೊತೆ ಆಟವಾಡುತ್ತಿದೆ ಎಂದರು. ಹಾಗೂ ಕೇರಳ ,ಬಾಂಬೆ, ಮದ್ರಾಸ್ ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಕಾಲೇಜು ಅಭಿವೃದ್ಧಿ ಸಮಿತಿಗೆ ಬದ್ದರಾಗಿ ಇರಬೇಕಾಗಿಲ್ಲ ಎಂದು ತಿಳಿಸಿದರು. ವಕೀಲರಾದ ಸಂಜಯ್ ಹೆಗ್ಡೆ ಅವರು ವಾದ ಮಂಡಿಸಿ ಶಾಂತಿ ನೆಲೆಸಬೇಕು ಎಂಬುದು ನಮ್ಮ ವಾದ. ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಲು ಅನುಮತಿ ನೀಡಬೇಕು. ನಮಗೆ ಯಾವುದೇ ಪ್ರತ್ಯೇಕತೆ ಬೇಡ. ಹೆಗಲ ಮೇಲೆ ಬಟ್ಟೆ( ಶಾಲು) ಹೊದಿಸುತ್ತಾರಲ್ಲಾ ಹಾಗೆಯೇ ಇವರು ತಲೆಯ ಮೇಲೆ ಧರಿಸುತ್ತಾರೆ. ವೈವಿಧ್ಯತೆ ಹೊಂದಿರುವ ದೇಶದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು. ಮಹಿಳೆ ಯ ಗುರುತು ಗೌರವಕ್ಕೆ ಧಕ್ಕೆ ಆಗಬಾರದು ಎಲ್ಲರ ಗೌರವಕ್ಜೂ ಧಕ್ಕೆ ಯಾಗದ ರೀತಿ ಸರಕಾರ ಕ್ರಮ ಕೈಗೊಳ್ಳಬೇಕು.
ವಿಚಾರಣೆ ವೇಳೆ ವಕೀಲರಾದ ದೇವದತ್ ಕಾಮತ್ ಸರಕಾರದ ಆದೇಶ ಕಾನೂನು ಬಾಹಿರ ಎನ್ನುವುದನ್ನು ನಾನು ನಿರೂಪಿಸುತ್ತೇವೆ ಎಂದು 15 ರಿಂದ 20 ನಿಮಿಷ ಕಾಲಾವಕಾಶ ಕೇಳಿಕೊಂಡರು. ಇದೇ ವೇಳೆ ಕೇರಳ ದ ವಕೀಲರಾದ ಕಾಳೀಶ್ವರಂ ರಾಜ್ ಅವರು ವಾದಿಸಿ ಸಿಖ್ಖರಿಗೆ ಕೃಪಾಣ್ ಧರಿಸಲು ಅನುಮತಿ ನೀಡಿದಂತೆ ಹಿಜಾಬ್ ಧರಿಸಲು ಅನುಮತಿ ನೀಡಿ ಎಂದು ಮಧ್ಯಂತರ ಆದೇಶಕ್ಕೆ ಒತ್ತಾಯಿಸಿದ್ದರು. ಹಾಗೂ ಈ ವೇಳೆ ವಾದಿಸಿದ ವಕೀಲರಾದ ಸಂಜಯ್ ಹೆಗ್ಡೆ ಅವರು ಇಚ್ಚಾಸಾರ ಬಟ್ಟೆ ಧರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದಲ್ಲಿ ಇದೆ. ಸಮವಸ್ತ್ರ ಧರಿಸದಿದ್ದರೆ ದಂಡ ವಿಧಿಸುವ ಅವಕಾಶ ಇಲ್ಲ ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿಲ್ಲ ಎಂದರು.
ವಾದ ವಿವಾದಗಳನ್ನು ಆಲಿಸಿದ ವಿಸ್ತ್ರತ ಪೀಠ ಪ್ರಕರಣದಲ್ಲಿ ಹಲವು ಸೂಕ್ಷ್ಮಗಳು ಇರುವ ಹಿನ್ನೆಲೆಯಲ್ಲಿ ವಿಸ್ತೃತ ವಿಚಾರಣೆಯ ಅಗತ್ಯವಿದೆ ಅಭಿಪ್ರಾಯಪಟ್ಟು, ಪ್ರಕರಣವನ್ನು ಸೋಮವಾರಕ್ಕೆ (ಫೆ.14) ಮುಂದೂಡಿತು. ರಾಜ್ಯದ ಎಲ್ಲ ಶಾಲಾ-ಕಾಲೇಜುಗಳು ಶೀಘ್ರ ಆರಂಭವಾಗಬೇಕು. ಮುಂದಿನ ಆದೇಶದವರೆಗೆ ಧಾರ್ಮಿಕ ಗುರುತುಗಳನ್ನು ಬಳಸುವಂತಿಲ್ಲ. ಕೇಸರಿ ಶಾಲು ಅಥವಾ ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗುವಂತಿಲ್ಲ ಎಂದು ನ್ಯಾಯಾಲಯವು ಮೌಖಿಕ ಆದೇಶದಲ್ಲಿ ತಿಳಿಸಿ ಮಧ್ಯಂತರ ಆದೇಶ ನೀಡಿದೆ.
| |