ಆತ್ಮ ನಿರ್ಭರ ಭಾರತ ಪ್ಯಾಕೇಜ್ ನಲ್ಲಿ ಮೀನುಗಾರಿಕೆಗೆ ಆದ್ಯತೆ ಸ್ವಾಗತಾರ್ಹ: ಯಶ್‌ಪಾಲ್
ಉಡುಪಿ: ಕೋವಿಡ್ ಸಂಬಂಧಿತ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಗೆ ಬಲ ತುಂಬಲು ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ಗಾತ್ರದ ಆತ್ಮ ನಿರ್ಭರ ಭಾರತ ವಿಶೇಷ ಆರ್ಥಿಕ ಪ್ಯಾಕೇಜ್ ಮೂಲಕ ಎಲ್ಲಾ ಕ್ಷೇತ್ರದೊಂದಿಗೆಗೆ ಮೀನುಗಾರಿಕೆಯ ಅಭಿವೃದ್ಧಿಗೂ ಆದ್ಯತೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲ ಸೀತರಾಮನ್ ರವರಿಗೆ ದ.ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.
ಈ ವಿಶೇಷ ಆರ್ಥಿಕ ಪ್ಯಾಕೇಜ್‌ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಕೃಷಿಕರಿಗೆ, ಮೀನುಗಾರರಿಗೆ ರಿಯಾಯಿತಿ ದರದ ಸಾಲ ಯೋಜನೆಗೆ 2 ಲಕ್ಷ ಕೋಟಿ, ಸಾಗರ ಮತ್ತು ಒಳನಾಡು ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ 11 ಸಾವಿರ ಕೋಟಿ ಹಾಗೂ ಮೀನು ಮಾರುಕಟ್ಟೆ, ಸಂಸ್ಕರಣ ಘಟಕ ನಿರ್ಮಾಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ 9000 ಕೋಟಿ ಮೀಸಲಿರಿಸಲಾಗಿದೆ.
ಮೀನುಗಾರಿಕೆ ಕ್ಷೇತ್ರದಲ್ಲಿ 55 ಲಕ್ಷ ಉದ್ಯೋಗಾವಕಾಶ ಸೃಷ್ಟಿಸಿ ಮುಂದಿನ 5 ವರ್ಷಗಳಲ್ಲಿ 70 ಲಕ್ಷ ಟನ್ ಹೆಚ್ಚುವರಿ ಉತ್ಪಾದನೆಗೆ ಕೇಂದ್ರ ಸರಕಾರ ಯೋಜನೆ ರೂಪಿಸುವ ಮೂಲಕ ಮೀನುಗಾರರಲ್ಲಿ ಹೊಸ ಚೈತನ್ಯ ತುಂಬಿದೆ.
ಈ ಯೋಜನೆಯನ್ನು ರಾಜ್ಯ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಹಾಗೂ ಮೀನುಗಾರಿಕಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ವಿಶೇಷ ಮುತುವರ್ಜಿಯಿಂದ ಮೀನುಗಾರಿಕಾ ಇಲಾಖೆ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ ಮೀನುಗಾರಿಕೆ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಸಲ್ಲಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.