ಹಿಜಾಬ್ ವಿವಾದದಿಂದಾಗಿ ಶಿಕ್ಷಣ ಸ್ಥಗಿತ ಗೊಳ್ಳುವುದು ಬೇಡ- ಮುಖ್ಯ ನ್ಯಾಯಮೂರ್ತಿ
ಬೆಂಗಳೂರು: ಹಿಜಾಬ್ ವಿವಾದದಿಂದ ಶಿಕ್ಷಣವನ್ನು ಸ್ಥಗಿತ ಮಾಡುವುದು ಸರಿಯಲ್ಲ. ಶಾಲೆಗಳನ್ನು ಶೀಘ್ರಗತಿಯಲ್ಲಿ ಆರಂಭಿಸಿ ಎಂದು ಮುಖ್ಯ ನ್ಯಾಯಮೂರ್ತಿ ಸರ್ಕಾರಕ್ಕೆ ಗುರುವಾರ ಸಲಹೆ ನೀಡಿದ್ದಾರೆ.
ಹಿಜಾಬ್ ವಿವಾದ ಸಂಬಂಧ 3ನೇ ದಿನ ವಿಚಾರಣೆ ಇಂದು ಮಧ್ಯಾಹ್ನ ಆರಂಭವಾಗಿದ್ದು, ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ.ಖಾಜಿ ಜೈಬುನ್ನೀಸಾ, ನ್ಯಾ.ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಸುತ್ತಿದೆ. ಫೆ.8, 9 ರಂದು ಎರಡು ದಿನಗಳ ಕಾಲ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದಿಂದ ಹಿಜಾಬ್ ಕುರಿತ ಅರ್ಜಿಗಳ ವಿಚಾರಣೆ ನಡೆದ ಬಳಿಕ ಪ್ರಕರಣ ಧರ್ಮ ಸೂಕ್ಷ್ಮವಾದ ಕಾರಣ ಇದನ್ನು ನ್ಯಾಯಮೂರ್ತಿಗಳು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರು. ಇದೀಗ ಮೂವರು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಹಿಜಾಬ್ ಕುರಿತ ಅರ್ಜಿಗಳ ವಿಚಾರಣೆ ನಡೆಯುತ್ತಿದೆ.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿಯವರು, ಹಿಜಾಬ್ ವಿವಾದದ ಕಾರಣಕ್ಕಾಗಿ ಶಾಲೆ ಗಳನ್ನು ಸ್ಥಗಿತಗೊಳಿಸಿದ ಸರ್ಕಾರದ ಕ್ರಮದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ವಿವಾದದಿಂದ ಶಿಕ್ಷಣವನ್ನು ಸ್ಥಗಿತ ಮಾಡುವುದು ಸರಿಯಲ್ಲ. ಶಾಲೆಗಳನ್ನು ಶೀಘ್ರಗತಿಯಲ್ಲಿ ಆರಂಭಿಸಿ. ವಿವಾದ ಕಾರಣದಿಂದ ಮಕ್ಕಳನ್ನು ಶಿಕ್ಷಣ ದಿಂದ ದೂರ ಇಡುವುದು ಸರಿಯಲ್ಲ ಎಂದು ಹೇಳಿದರು.
ಇದನ್ನು ಸರ್ಕಾರದ ಪರ ವಕೀಲರು ಒಪ್ಪಿಕೊಂಡರು. ಇದೇ ವೇಳೆ ಅರ್ಜಿದಾರರ ಪರ ವಕೀಲ ಕಾಮತ್ ಅವರು, ಹಿಜಾಬ್ ಧಾರ್ಮಿಕ ಆಚರಣೆಯಲ್ಲ. ಮೂಲಭೂತ ಹಕ್ಕು ಎಂದು ವಾದ ಮಂಡನೆ ಮಾಡಿದರು. ಅಲ್ಲದೆ, ಈ ಸಂಬಂಧ ಮಧ್ಯಂತರ ಆದೇಶಕ್ಕೂ ಒತ್ತಾಯಿಸಿದರು.