ಮೀನುಗಾರಿಕೆ ಅಭಿವೃದ್ಧಿಗೆ ಬಜೆಟ್ ನಲ್ಲಿ ವಿಶೇಷ ಯೋಜನೆ: ಯಶ್ಪಾಲ್ ಸುವರ್ಣ ಮನವಿ
ಉಡುಪಿ: ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಮೀನುಗಾರರ ಹಲವು ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಮುಂಬರುವ 2022- 23ನೇ ಸಾಲಿನ ಬಜೆಟ್ ನಲ್ಲಿ ವಿಶೇಷ ಯೋಜನೆ ರೂಪಿಸುವಂತೆ ಕರಾವಳಿ ಜಿಲ್ಲೆಯ ಸಮಸ್ತ ಮೀನುಗಾರರ ಪರವಾಗಿ ಮೀನುಗಾರಿಕೆ ಸಚಿವರಾದ ಅಂಗಾರರವರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಮೀನುಗಾರಿಕೆ ಸಚಿವರ ಅಧ್ಯಕ್ಷತೆ ಯಲ್ಲಿ ಜರಗಿದ ಮೀನುಗಾರಿಕೆ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮೀನುಗಾರರ ಬಹುದಿನಗಳ ಬೇಡಿಕೆಗಳಾದ ರಾಜ್ಯ ಮಾರಾಟ ಕರಮುಕ್ತ ಡೀಸೆಲ್ ಕೋಟಾ ಹೆಚ್ಚಳ, ಸೀ ಆಂಬ್ಯುಲೆನ್ಸ್ ಮತ್ತು ತುರ್ತು ಚಿಕಿತ್ಸಾ ಘಟಕ, ಕಾಪು ತೀರದಲ್ಲಿ ನಾಡ ದೋಣಿ ತಂಗಲು ಇಳಿದಾಣ ಕೇಂದ್ರ, ಬಂದರು ಹೂಳು ತೆಗೆಯಲು ಇಲಾಖೆ ವತಿಯಿಂದ ಡ್ರೆಜ್ಜರ್ ಖರೀದಿ, ಮೀನುಗಾರರಿಗೆ 1 ಲಕ್ಷದ ವರೆಗೆ ಶೂನ್ಯ ಬಡ್ಡಿದರ ಸಾಲ ಯೋಜನೆ, ನಾಡ ದೋಣಿಗಳಿಗೆ ಸೀಮೆ ಏಣ್ಣೆ ಪ್ರಮಾಣ ಹೆಚ್ಚಳ, ನಾಡ ದೋಣಿಗಳಿಗೆ ಇಲೆಕ್ಟ್ರಿಕಲ್ ಇಂಜಿನ್ ಪರಿವರ್ತನೆ ಗೆ ಸಹಾಯ ಧನ, ಮೀನುಗಾರರ ಸಹಕಾರಿ ಸಂಘಗಳ ಸಾಲ ಮನ್ನಾ, ಮತ್ಸ್ಯ ಮಹಿಳಾ ಸ್ವಾವಲಂಬನೆ ಯೋಜನೆ ಸಹಿತ ಹಲವು ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ ಒದಗಿಸಿ ಮೀನುಗಾರಿಕೆ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಮಾ, ನಿರ್ದೇಶಕರಾದ ರಾಮಾಚಾರ್ಯ, ಅಪರ ನಿರ್ದೇಶಕರಾದ ತಿಪ್ಪೇಸ್ವಾಮಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಎಂಕೆ, ದ.ಕ. ಮೀನು ಮಾರಾಟ ಫೆಡರೇಷನ್ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕುಮಾರ್ ಉಪಸ್ಥಿತರಿದ್ದರು.