| ಉಡುಪಿ ಫೆ.10(ಉಡುಪಿ ಟೈಮ್ಸ್ ವರದಿ): ಶಿಸ್ತಿನ ಹೆಸರಿನಲ್ಲಿ ಸಂವಿಧಾನತ್ಮಕ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸಬಾರದು ಹಾಗೂ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಉದ್ದೇಶ ಮಕ್ಕಳಿಗೆ ಶಿಕ್ಷಣ ನೀಡುವುದು ಆಗಿರಬೇಕೇ ಹೊರತು ಇತರರ ಆಚರಣೆಗಳನ್ನು ತಡೆಯುವುದು ಅಥವಾ ತಮ್ಮ ಆಚರಣೆಗಳನ್ನು ಅವರ ಮೇಲೆ ಹೇರುವುದು ಆಗಿರಬಾರದು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಕಾಪುವಿನಲ್ಲಿ ನಡೆದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕೇಂದ್ರ ಸಮಿತಿಯ ಸಭೆಯಲ್ಲಿ ವಿದ್ಯಾರ್ಥಿನಿಯರ ಶಿರವಸ್ತ್ರದ ವಿವಾದದ ಕುರಿತು ಮಂಡಿಸಲಾದ ಠರಾವುಗಳ ಬಗ್ಗೆ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಹೂಡೆ ಹಾಗೂ ಉಪಾಧ್ಯಕ್ಷ ಇದ್ರಿಸ್ ಹೂಡೆ ಮಾಹಿತಿ ನೀಡಿದರು. ಈ ಬಗ್ಗೆ ಮಾತನಾಡಿದ ಅವರು, ಪ್ರೌಢಾವಸ್ಥೆಗೆ ತಲುಪಿದ ಹೆಣ್ಣು ಮಕ್ಕಳಿಗೆ ಇಸ್ಲಾಮ್ ಧರ್ಮದಲ್ಲಿ ಶಿರವಸ್ತಾಧಾರಣೆ ಧಾರ್ಮಿಕ ಕರ್ತವ್ಯವಾಗಿದೆ. ಇದಕ್ಕೆ ದೇಶದ ಸಂವಿಧಾನವೂ ಮುಕ್ತ ಅವಕಾಶ ನೀಡಿದೆ. ಆದ್ದರಿಂದ ದೇಶದ ಸಂವಿಧಾನದಕ್ಕನುಸಾರವಾಗಿ ನಡೆಯುವ ಯಾವುದೇ ಸಂಸ್ಥೆಯು ಇದಕ್ಕೆ ಅಡ್ಡಿಯುಂಟು ಮಾಡಬಾರದು.
ವಿದ್ಯಾಸಂಸ್ಥೆಗಳಿಗೆ ಸಂಬಂಧಿಸಿದ ಯಾವುದೇ ನಿಯಮ ಅಥವಾ ಉಪನಿಯಮಗಳನ್ನು ಯಾವುದೇ ಜಾತಿ, ಧರ್ಮ, ವರ್ಗ, ಸಮುದಾಯ, ಅಥವಾ ಸಂಪ್ರದಾಯದವರು ತಮ್ಮ ಶಿಕ್ಷಣದ ಹಕ್ಕಿನಿಂದ ವಂಚಿತರಾಗದಂತೆ ಸಂವೇದನಾಶೀಲವಾಗಿ ರಚಿಸಬೇಕು. ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಉದ್ದೇಶ ಮಕ್ಕಳಿಗೆ ಶಿಕ್ಷಣ ನೀಡುವುದು ಆಗಿರಬೇಕೇ ಹೊರತು ಇತರರ ಆಚರಣೆಗಳನ್ನು ತಡೆಯುವುದು ಅಥವಾ ತಮ್ಮ ಆಚರಣೆಗಳನ್ನು ಅವರ ಮೇಲೆ ಹೇರುವುದು ಆಗಿರಬಾರದು ಎಂದರು.
ಸ್ಕಾರ್ಫ್ ಧಾರಣೆ ಯಾವುದೇ ಸಮವಸ್ತ್ರ ಸಂಹಿತೆಯನ್ನು ಉಲ್ಲಂಘಿಸುವುದಿಲ್ಲ. ಸ್ಕಾರ್ಫ್ ಧರಿಸಬಯಸುವ ವಿದ್ಯಾರ್ಥಿನಿಯರು ಶಾಲೆಯ ಸಮವಸ್ತ್ರ ನಿಯಮದಲ್ಲಿ ತಿಳಿಸಲಾಗಿರುವ ಬಣ್ಣಕ್ಕೆ ಅನುಸಾರವಾದ ಸ್ಕಾರ್ಫ್ ಧರಿಸಲು ಸಿದ್ಧರಾಗಿದ್ದು ಅವರ ಈ ಬೇಡಿಕೆ ನ್ಯಾಯೋಚಿತವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೂ ರಾಜಕೀಯ ಪಕ್ಷಗಳು ಮತ್ತು ಅವುಗಳಿಂದ ಬೆಂಬಲಿತ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ನಡೆಸಬಾರದು ಮತ್ತು ವಿದ್ಯಾರ್ಥಿಗಳ ಧಾರ್ಮಿಕ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯುವ ಅಥವಾ ವಿದ್ಯಾರ್ಥಿಗಳನ್ನು ಪರಸ್ಪರ ಸಂಘರ್ಷಕ್ಕೆ ಪ್ರಚೋದಿಸುವಂತಹ ಚಟುವಟಿಕೆಗಳನ್ನು ನಡೆಸಬಾರದು ಎಂದರು.
ಒಟ್ಟು ಸಮಾಜ ಮತ್ತು ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮುಸ್ಲಿಂ ಸಮಾಜದ ನಾಯಕರು ಮತ್ತು ಸಂಘಟನೆಗಳು ವ್ಯಕ್ತಿಗತವಾಗಿ ಅಥವಾ ಕೇವಲ ತಮ್ಮ ಸಂಘಟನೆಯ ಮಟ್ಟದಲ್ಲಿ ನಿರ್ಣಯಗಳನ್ನು ಕೈಗೊಳ್ಳದೆ ಸಮುದಾಯದ ಇತರ ಸಂಘಟನೆ ಗಳೊಂದಿಗೆ ಸಮಾಲೋಚಿಸಿ ಸಾಮೂಹಿಕ ನಿರ್ಣಯಗಳಿಗೆ ಅನುಸಾರವಾದ ನಿಲುವನ್ನು ತಳೆಯಬೇಕು ಎಂದು ಆಗ್ರಹಿಸಿದರು.
ಇನ್ನು ಉಡುಪಿಯ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿರವಸ್ತ್ರ ಧಾರಣೆಯ ಕುರಿತು ಎಬ್ಬಿಸಲಾಗಿರುವ ವಿವಾದವನ್ನು ಸಂವಿಧಾನದ ಚೌಕಟ್ಟಿನಲ್ಲಿ ಬಗೆಹರಿಸಬೇಕು ಎಂಬ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟವು ಪ್ರಯತ್ನಗಳನ್ನು ಮಾಡಿದೆ. ಆದರೆ ಶಾಲಾ ಪ್ರಾಂಶುಪಾಲರು, ಭೋಧಕ ವರ್ಗ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯು ಭಾರತೀಯ ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾದ ತೀರಾ ಸಂಕುಚಿತ ಹಾಗೂ ನಕಾರಾತ್ಮಕ ನಿಲುವನ್ನು ತಾಳಿರುವುದು ಸಮಸ್ಯೆಯ ಪರಿಹಾರಕ್ಕೆ ದೊಡ್ಡ ತಡೆಯಾಗಿ ಪರಿಣಮಿಸಿತು. ಆದ್ದರಿಂದ ಶಾಲೆಯ ಹಂತದಲ್ಲಿ ಪರಿಹರಿಸಬಹುದಾದ ವಿಷಯ ಒಂದು ದೊಡ್ಡ ಸಮಸ್ಯೆಯನ್ನು ಸೃಷ್ಟಿಯಾಯಿತು ಎಂದರು. | |