ವಿಪಕ್ಷಗಳು ಮುಸ್ಲಿಂ ಹೆಣ್ಣುಮಕ್ಕಳನ್ನು ಹಾದಿ ತಪ್ಪಿಸುತ್ತಿವೆ, ಅವರ ಹಕ್ಕುಗಳನ್ನು ಹತ್ತಿಕ್ಕಲು ಹೊಸ ದಾರಿ ಹುಡುಕುತ್ತಿದ್ದಾರೆ: ಪ್ರಧಾನಿ ಮೋದಿ
ಸಹರಾನ್ ಪುರ: ನಮ್ಮ ಸರ್ಕಾರ ಮುಸ್ಲಿಂ ಜನಾಂಗದ ಮಹಿಳೆಯರ ಉದ್ಧಾರಕ್ಕೆ ನಿಂತಿದೆ. ನಮ್ಮ ಸರ್ಕಾರ ಪ್ರತಿ ಸಂತ್ರಸ್ತ ಮುಸ್ಲಿಂ ಮಹಿಳೆಯೊಂದಿಗೆ ನಿಂತಿದೆ. ಆದರೆ ಅವರು ಮುಸ್ಲಿಂ ಸಹೋದರಿಯರನ್ನು ಮೋಸ ಮಾಡುತ್ತಿದ್ದಾರೆ ಇದರಿಂದ ಮುಸ್ಲಿಂ ಹೆಣ್ಣು ಮಕ್ಕಳ ಜೀವನ ಯಾವಾಗಲೂ ಹಿಂದೆ ಉಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಈ ಮೂಲಕ ಕರ್ನಾಟಕದ ಉಡುಪಿಯಲ್ಲಿ ಆರಂಭವಾಗಿ ಇಂದು ದೇಶ-ವಿದೇಶಗಳಲ್ಲಿ ಸದ್ದು ಮಾಡಿರುವ ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಉತ್ತರ ಪ್ರದೇಶದ ಸಹರನ್ಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭೌತಿಕವಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳು ಮತ್ತು ಅಭಿವೃದ್ಧಿಯನ್ನು ತಡೆಯಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಮುಸ್ಲಿಂ ಮಹಿಳೆಯರು ತುಳಿತಕ್ಕೊಳಗಾಗದಂತೆ ನೋಡಿಕೊಳ್ಳಲು ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅತ್ಯಗತ್ಯ ಎಂದು ಒತ್ತಿ ಹೇಳಿದರು.
ಬಿಜೆಪಿ ಸರ್ಕಾರ ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್ ಎಂಬ ಅನಿಷ್ಠ ಪದ್ದತಿಯಿಂದ ಮುಕ್ತಗೊಳಿಸಿದೆ. ಮುಸ್ಲಿಂ ಮಹಿಳೆಯರು ಬಹಿರಂಗವಾಗಿ ಮೋದಿ ಸರ್ಕಾರವನ್ನು ಬೆಂಬಲಿಸಲು ಆರಂಭಿಸಿದಾಗ, ವಿರೋಧಿಗಳು ಆತಂಕಗೊಂಡರು. ನಾವು ಪ್ರತಿ ಮುಸ್ಲಿಂ ಮಹಿಳೆಯೊಂದಿಗೆ ನಿಲ್ಲುತ್ತೇವೆ ಎಂದು ಒತ್ತಿ ಹೇಳಿದರು.
ಹಿಜಾಬ್ ಧರಿಸಿದ ಕಾರಣಕ್ಕಾಗಿ ಆರು ಮಂದಿ ವಿದ್ಯಾರ್ಥಿನಿಯರಿಗೆ ತಮ್ಮ ಕಾಲೇಜಿಗೆ ಪ್ರವೇಶಿಸಲು ಅವಕಾಶ ನೀಡದ ನಂತರ ಕಳೆದ ತಿಂಗಳು ಜನವರಿ ಅಂತ್ಯಕ್ಕೆ ಭುಗಿಲೆದ್ದ ಕರ್ನಾಟಕದ ಪ್ರಮುಖ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.
ಈ ಗಲಾಟೆ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ಕದನವಾಗಿ ಮಾರ್ಪಟ್ಟಿದ್ದು ಇಂದು ಹೈಕೋರ್ಟ್ ತೀರ್ಪು ಏನು ಬರುತ್ತದೆ ಎಂದು ಕುತೂಹಲವಾಗಿದೆ. ರಾಜ್ಯವನ್ನು ಗಲಭೆ ಮುಕ್ತವಾಗಿಡಲು, ಮಹಿಳೆಯರನ್ನು ಭಯದಿಂದ ಮುಕ್ತವಾಗಿಡಲು ಮತ್ತು ಅಪರಾಧಿಗಳನ್ನು ಜೈಲಿಗೆ ಕಳುಹಿಸಲು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಗತ್ಯ ಎಂದು ಮತ್ತೊಮ್ಮೆ ಯೋಗಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮತದಾರರನ್ನು ಕೋರಿಕೊಂಡರು. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಗತ್ಯವಿದ್ದು, ಬಡವರು ಉತ್ತಮ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ನೀಡಿದ ಹಣ ಸಣ್ಣ ರೈತರ ಬ್ಯಾಂಕ್ ಖಾತೆಗಳಿಗೆ ಹೋಗುವಂತೆ ಮಾಡಲು ಬಿಜೆಪಿ ಸರ್ಕಾರವೂ ಅಗತ್ಯವಿದೆ ಎಂದು ಅವರು ಹೇಳಿದರು.