ಹಿಜಾಬ್ ವಿವಾದ: ಕಾಂಗ್ರೆಸ್ ಪಕ್ಷದ ಶವಪೆಟ್ಟಿಗೆಗೆ ಅಂತಿಮ ಮೊಳೆ- ಪೆರ್ಣಂಕಿಲ ಶ್ರೀಶ ನಾಯಕ್
ಉಡುಪಿ: ಸರ್ಕಾರಿ ಬಾಲಕಿಯರ ಕಾಲೇಜಿನ 6 ಮಂದಿ ಮುಸ್ಲೀಂ ವಿದ್ಯಾರ್ಥಿನಿಯರ ಮೂಲಕ ಹುಟ್ಟು ಹಾಕಲಾದ ಹಿಜಾಬ್ ವಿವಾದವನ್ನು ಈಗ ಸಂಘ ಪರಿವಾರ ಮತ್ತು ಎಬಿವಿಪಿ ತಲೆಗೆ ಕಟ್ಟುತ್ತಿರುವ ಕ್ಯಾಂಪಸ್ ಫ್ರಂಟ್ ಮತ್ತು ಇತರ ಮುಸ್ಲೀಂ ಸಂಘಟನೆಗಳ ಆರೋಪ ಖಂಡನೀಯ.
ಈ ವಿವಾದ ವಿಷಯದಲ್ಲಿ ಹಿಂದುಗಳು ಸಂಘಟಿತರಾಗಿದ್ದು ಮುಂದಿನ ದಿನಗಳಲ್ಲಿ ಈ ವಿವಾದವು ಹಿಜಾಬ್ ನ್ನು ಬೆಂಬಲಿಸುತ್ತಿರುವ ಸಂಘಟನೆಗಳಿಗೆ ದುಬಾರಿಯಾಗಲಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಎಚ್ಚರಿಕೆ ನೀಡಿದ್ದಾರೆ. ತಮ್ಮ ಹಾಸ್ಯಾಸ್ಪದ ನಡವಳಿಕೆ, ಹೇಳಿಕೆಗಳಿಂದ ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಲು ಹೊರಟಿರುವ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಅವರು ಹಿಜಾಬ್ ವಿಷಯದಲ್ಲಿ ಹಿಂದುಗಳ ವಿರುದ್ಧ ಮತ್ತೊಮ್ಮೆ ಅಸಂಬದ್ಧವಾಗಿ ಮಾತನಾಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯುತಿದ್ದಾರೆ ಎಂದವರು ಟೀಕಿಸಿದ್ದಾರೆ.
ಉಡುಪಿ ಬಾಲಕಿಯರ ಸರ್ಕಾರಿ ಕಾಲೇಜಿನ 6 ಮಂದಿ ಮುಸ್ಲೀಂ ವಿದ್ಯಾರ್ಥಿನಿಯರ ಹಠ ಮತ್ತು ಮಾತುಗಳನ್ನು ಗಮನಿಸಿದರೇ, ಈ ವಿವಾದ ಅವರ ಸ್ವಯಂಯಿಚ್ಛೆಯಿಂದ ನಡೆಯುತ್ತಿರುವುಲ್ಲ, ಅದರ ಹಿಂದೆ ಸಾಕಷ್ಟು ತಯಾರಿ ತರಬೇತಿ ನಡೆದಿರುವುದು ಸಾರ್ವಜನಿಕರಿಗೆ ಮನವರಿಕೆಯಾಗಿದೆ. ಈ ವಿದ್ಯಾರ್ಥಿಗಳು ಈಗ ಉಡುಪಿ ಶಾಸಕರಾದ ರಘಪತಿ ಭಟ್ ಅವರನ್ನು ದೂಷಿಸುತ್ತಿರುವುದು ಕೂಡ ಅವರಿಗೆ ನೀಡಲಾಗಿರುವ ತರಬೇತಿಯ ಭಾಗವಾಗಿದೆ. ಈ ಷಡ್ಯಂತ್ರವನ್ನು ಪೊಲೀಸರು ಬಯಲಿಗೆಳೆಯಬೇಕು ಮತ್ತು ರಾಜ್ಯದಲ್ಲಿ ಸಮಾನ ಶಿಕ್ಷಣ ಮತ್ತು ಶಿಕ್ಷಣದಲ್ಲಿ ಸಮಾನ ಸಮವಸ್ತ್ರಸಂಹಿತೆ ಜಾರಿಗೊಳಿಸಬೇಕು ಎಂದು ಶ್ರೀಶ ನಾಯಕ್ ಆಗ್ರಹಿಸಿದ್ದಾರೆ.