ಮಣಿಪಾಲ: ನವವಿವಾಹಿತೆಯನ್ನು ಕತ್ತಿಯಿಂದ ಕಡಿದ ಸೋದರ ಮಾವ
ಮಣಿಪಾಲ ಫೆ.10: ಆಸ್ತಿ ವಿಚಾರವಾಗಿ ನವವಿವಾಹಿತ ಮಹಿಳೆಗೆ ಸೋದರ ಮಾವನೇ ಕತ್ತಿಯಿಂದ ಕಡಿದು ಹಲ್ಲೆ ನಡೆಸಿರುವ ಘಟನೆ ಪರ್ಕಳ ಹೆರ್ಗದ ಗರಡಿ ಬಳಿ ನಡೆದಿದೆ.
28 ವರ್ಷದ ದೀಪಾ ನಾಯಕ್ ಅವರಿಗೆ ಸೋದರ ಮಾವ ಜಗದೀಶ್ ನಾಯಕ್ ಎಂಬಾತ ಹಲ್ಲೆ ನಡೆಸಿದ್ದಾನೆ.
ದೀಪಾ ಅವರ ಪತಿ ಯಮನೂರಿ ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ನಿನ್ನೆ ಬೆಳಿಗ್ಗೆ 11.30 ರ ಸುಮಾರಿಗೆ ದೀಪಾ ನಾಯಕ್ ಅವರು ಮನೆಯ ಹೊರಗೆ ನಿಂತು ಪಕ್ಕದ ಮನೆಯವರು ನಡೆಸುತ್ತಿದ್ದ ಸರ್ವೆಯನ್ನು ನೋಡುತ್ತಿದ್ದಾಗ, ಆಪಾದಿತ ಜಗದೀಶ್ ನಾಯಕ್ ಆಸ್ತಿ ವಿಚಾರದ ಪೂರ್ವ ದ್ವೇಷದಿಂದ ದೀಪಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಮಾತ್ರವಲ್ಲದೆ ತನ್ನ ಕೈಯಲ್ಲಿದ್ದ ಕತ್ತಿಯಿಂದ ತಲೆಯ ಹಿಂಬದಿಗೆ ಹೊಡೆದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ದೀಪಾ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.