ಸಮವಸ್ತ್ರ ಧರಿಸುವುದು ಕಡ್ಡಾಯವಲ್ಲ- ಪಿಯುಸಿ ಇಲಾಖೆ ವೆಬ್ ಸೈಟ್’ನ ಮಾರ್ಗಸೂಚಿಯಲ್ಲಿದೆ!

ಮಂಗಳೂರು: ಹಿಜಾಬ್ ವಿವಾದ ದೂರದ ಕರಾವಳಿಯಿಂದ ಆರಂಭವಾಗಿ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ, ಪಿಯುಸಿ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಸರ್ಕಾರಕ್ಕೆ ವ್ಯತಿರಿಕ್ತವಾದ ಮಾರ್ಗಸೂಚಿ ಕಂಡುಬಂದಿರುವುದು ಚರ್ಚೆಯನ್ನು ಹುಟ್ಟುಹಾಕಿದೆ. 

ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರವೇಶ ಮಾರ್ಗಸೂಚಿ 2021-22 ಪ್ರಕಾರ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಧರಿಸುವುದು ಕಡ್ಡಾಯವಲ್ಲ, ಕೆಲವು ಕಾಲೇಜು ಪ್ರಾಂಶುಪಾಲರು ಮತ್ತು ಆಡಳಿತ ವರ್ಗ ಸಮವಸ್ತ್ರವನ್ನು ಕಡ್ಡಾಯ ಮಾಡುವುದು ನಿಯಮಗಳ ಉಲ್ಲಂಘನೆಯಾಗಿದೆ. ಇಂತಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದೆ.

ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಹೊರಡಿಸಿರುವ ಹೇಳಿಕೆಗಳಿಗೆ ವ್ಯತಿರಿಕ್ತವಾಗಿದೆ. ಅವರು ಹೊರಡಿಸಿರುವ ಹೇಳಿಕೆಯಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದು ಕಡ್ಡಾಯವಾಗಿದ್ದು, ಹಿಂದಿನ ಕಾಂಗ್ರೆಸ್ ಆಡಳಿತ ಸಮಯದಲ್ಲಿ ಕೂಡ ಅದು ಇತ್ತು. ಆದರೆ ಪದವಿ ಪೂರ್ವ ಪಿಯುಸಿ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದು ಕಡ್ಡಾಯ ಎಂದು ಹೇಳಿಲ್ಲ, ಮೊನ್ನೆ ಫೆಬ್ರವರಿ 5ರಂದು ಹೊರಡಿಸಿರುವ ಆದೇಶದಲ್ಲಿ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವುದು ಕಡ್ಡಾಯ ಎಂದು ಹೇಳಲಾಗಿದೆ.

ಕೆಲವು ತಿಂಗಳ ಹಿಂದೆ ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರ ಗುಂಪೊಂದು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿತ್ತು. ಹಿಜಾಬ್ ಅನ್ನು ನಿಷೇಧಿಸಿದ ಕೆಲವು ಕಾಲೇಜುಗಳಲ್ಲಿ ಇದೂ ಒಂದು ಆಗಿದೆ. ಕಾಲೇಜು ಅವರ ಬೇಡಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದಾಗ, ಹುಡುಗಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದರು, ಆದರೆ ತರಗತಿಗಳಿಗೆ ಪ್ರವೇಶಿಸಲು ಪ್ರಾಂಶುಪಾಲರು ಮತ್ತು ಇತರ ಬೋಧಕ ವರ್ಗ ಅನುಮತಿ ನೀಡಲಿಲ್ಲ. ಶೀಘ್ರದಲ್ಲೇ, ಅನೇಕ ಕಾಲೇಜುಗಳು ಇದನ್ನು ಅನುಸರಿಸಿದವು. ರಾಜ್ಯದ ಕೆಲವು ಉಪ ನಿರ್ದೇಶಕರು ಮಾತನಾಡಿ, ಈ ಮಾರ್ಗಸೂಚಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಹೇಳಿದ್ದಾರೆ.

ಸಮವಸ್ತ್ರ ಕಡ್ಡಾಯವಲ್ಲ ಎಂದು ಒಪ್ಪಿಕೊಂಡಿರುವ ದಕ್ಷಿಣ ಕನ್ನಡ ಡಿಡಿಪಿಯು ಜಯಣ್ಣ ಸಿ.ಡಿ, ಕಾಲೇಜುಗಳು ತಮ್ಮ ವಿದ್ಯಾರ್ಥಿಗಳ ಗುರುತಿನ ಉದ್ದೇಶಕ್ಕಾಗಿಯೇ ಸಮವಸ್ತ್ರವನ್ನು ಕಡ್ಡಾಯಗೊಳಿಸಿವೆ ಎಂದು ಹೇಳಿದರು. ಈ ಹಿಂದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಜಯಣ್ಣ, 1,500 ರಿಂದ 2,000 ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಸಮವಸ್ತ್ರವಿಲ್ಲದೆ ಬಂದರೆ ಅವರನ್ನು ನಿಭಾಯಿಸುವುದು ಕಷ್ಟವಾಗುತ್ತದೆ ಎನ್ನುತ್ತಾರೆ.

ಕಾಲೇಜಿಗೆ ಸಂಬಂಧಪಡದ ಹುಡುಗರು ಕ್ಯಾಂಪಸ್‌ಗೆ ಬಂದು ತರಗತಿಯಲ್ಲಿ ಕುಳಿತುಕೊಳ್ಳುತ್ತಾರೆ. ಅಂತಹ ವಿಷಯಗಳನ್ನು ತಡೆಯಲು ಸಮವಸ್ತ್ರ ಸಹಾಯ ಮಾಡುತ್ತದೆ ಎನ್ನುತ್ತಾರೆ ಜಯಣ್ಣ. ಹೀಗಿರುವಾಗ ಇಂತಹ ಮಾರ್ಗಸೂಚಿಯ ಉದ್ದೇಶವೇನು ಎಂದು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳು ಅಥವಾ ಪೋಷಕರಿಂದ ‘ಕೆಲವು ದೂರುಗಳು’ ಬಂದಲ್ಲಿ ಮಾತ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು, ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಉಲ್ಲಂಘನೆಯಾದರೂ ಕೂಡ ರಾಜ್ಯದ ಬಹುತೇಕ ಎಲ್ಲಾ ಪಿಯು ಕಾಲೇಜುಗಳು ಸಮವಸ್ತ್ರವನ್ನು ಕಡ್ಡಾಯ ಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!