2018-20ರಲ್ಲಿ ನಿರುದ್ಯೋಗ, ಸಾಲದ ಸಮಸ್ಯೆಯಿಂದ 25,000ಕ್ಕೂ ಹೆಚ್ಚು ಭಾರತೀಯರು ಆತ್ಮಹತ್ಯೆ!
ನವದೆಹಲಿ: 2018 ರಿಂದ 2020 ರ ನಡುವೆ ಭಾರತದಲ್ಲಿ ನಿರುದ್ಯೋಗ ಅಥವಾ ಸಾಲದ ಸಮಸ್ಯೆಯಿಂದ 25,000ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.
ಈ ಅವಧಿಯಲ್ಲಿ 9,140 ಜನರು ನಿರುದ್ಯೋಗದಿಂದ ಮತ್ತು 16,091 ಜನರು ಆರ್ಥಿಕ ದಿವಾಳಿತನ ಅಥವಾ ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮೇಲ್ಮನೆಗೆ ಮಾಹಿತಿ ನೀಡಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ಒದಗಿಸಿದ ದತ್ತಾಂಶವನ್ನು ಆಧರಿಸಿ ಅಂಕಿಅಂಶಗಳನ್ನು ನೀಡಲಾಗಿದೆ ಎಂದು ಹೇಳಿದರು.
ಕಳೆದ ಕೆಲವು ವಾರಗಳಿಂದ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ನಿರುದ್ಯೋಗ ಸಮಸ್ಯೆಯ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಒಳ್ಳೆಯ ದಿನಗಳು ದುರ್ಗಮವಾಗಿವೆ ಎಂದು ಈ ಅಂಕಿ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಅಂಕಿಅಂಶಗಳ ಪ್ರಕಾರ, 2020 ರ ಸಾಂಕ್ರಾಮಿಕ ವರ್ಷದಲ್ಲಿ ನಿರುದ್ಯೋಗಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಅತಿ ಹೆಚ್ಚು(3,548) ಪ್ರಕರಣಗಳು ದಾಖಲಾಗಿವೆ. 2018 ರಲ್ಲಿ 2,741 ಮಂದಿ ನಿರುದ್ಯೋಗದ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ, 2019 ರಲ್ಲಿ 2,851 ಮಂದಿ ಉದ್ಯೋಗವಿಲ್ಲದೆ ಸಾವಿಗೆ ಶರಣಾಗಿದ್ದಾರೆ.