| ಉಡುಪಿ ಫೆ.9 (ಉಡುಪಿ ಟೈಮ್ಸ್ ವರದಿ): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಿಜಾಬ್ ಪರವಾಗಿ ತೀರ್ಪು ಬರುತ್ತದೆ ಎಂಬ ನಂಬಿಕೆ ಇರುವುದಾಗಿ ವಿದ್ಯಾರ್ಥಿನಿಯೋರ್ವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ವ್ಯವಸ್ಥೆ ಮೇಲೆ ನಮಗೆ ನಂಬಿಕೆ ಇದೆ. ನಮ್ಮ ದೇಶದ ನ್ಯಾಯಾಲಯದ ತೀರ್ಪಿನ ಮೇಲೆ ಗೌರವವಿದೆ. ನಾವು ಯಾವುದೇ ಅಪರಾಧ ಮಾಡಿಲ್ಲ. ಸಂವಿಧಾನದಲ್ಲಿ ನೀಡಿರುವ ಹಕ್ಕನ್ನು ಕೇಳುತ್ತಿದ್ದೇವೆ ಹಾಗಾಗಿ ತೀರ್ಪು ಹಿಜಾಬ್ ಪರವಾಗಿ ಬರುತ್ತದೆ ಎಂಬ ನಂಬಿಕೆ ಇರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ವಿಷಯವನ್ನು ಶಾಲಾ ಮಟ್ಟದಲ್ಲಿಯೇ ಇತ್ಯರ್ಥಗೊಳಿಸುವ ಯೋಚನೆ ನಾವು ಹೊಂದಿದ್ದೆವು. ಅದಕ್ಕಾಗಿ ಸೆಪ್ಟೆಂಬರ್ ನಲ್ಲಿ ದ್ವಿತೀಯ ಪಿಯುಸಿ ತರಗತಿ ದಾಖಲಾತಿ ಆರಂಭವಾಗುವಾಗಲೇ ಈ ಬಗ್ಗೆ ಪೋಷಕರು ಪ್ರಾಂಶುಪಾಲರ ಜೊತೆ ಮಾತುಕತೆ ನಡೆಸಿದ್ದರು. ಆದರೆ ಆಗ ಪ್ರಾಂಶುಪಾಲರು ಈ ಬಗ್ಗೆ ಚರ್ಚೆ ನಡೆಸಿ ನಿಮ್ಮನ್ನು ಕರೆಯುತ್ತೇವೆ ಎಂದು ನವೆಂಬರ್ ವರೆಗೆ ಮುಂದೂಡುತ್ತಲೇ ಬಂದಿದ್ದರು. ಈ ಬಗ್ಗೆ ಪದೇ ಪದೇ ಕೇಳಿದರೂ ಯಾವುದೇ ಪ್ರತಿಕ್ರಿಯೆ ನೀಡದಾಗ ನಾವು ಹಿಜಾಬ್ ಹಾಕಿ ಕಾಲೇಜಿಗೆ ಬಂದೆವು. ಆ ಬಳಿಕ ಈ ವಿಷಯ ಡಿಸೆಂಬರ್ ನಲ್ಲಿ ಮಾಧ್ಯಮಗಳು ವರದಿ ಮಾಡಿದ ನಂತರ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು.
ಈ ವಿಚಾರವಾಗಿ ಮೂರು ನಾಲ್ಕು ಬಾರಿ ಪೋಷಕರು ಪ್ರಿನ್ಸಿಪಾಲ್ ಬಳಿ ಮಾತನಾಡಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಪೋಷಕರ ಮಾತನ್ನು ನಿರ್ಲಕ್ಯ ಮಾಡಿ ಮೂರು ನಾಲ್ಕು ಗಂಟೆಗಳ ವರೆಗೆ ಅವರನ್ನು ಹೊರಗೇ ಕೂರಿಸುತ್ತಿದ್ದರು ಎಂದರು ಆರೋಪಿಸಿದರು. ಇದೇ ವೇಳೆ ಹಿಜಾಬ್ ವಿಚಾರ ಇಷ್ಟು ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಲು ಶಾಸಕ ರಘುಪತಿ ಭಟ್ ಅವರ ತಪ್ಪು ಹೇಳಿಕೆಯೇ ಕಾರಣ ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ. ಶಾಸಕರು ನೀವು ಹಿಜಾಬ್ ಧರಿಸಿದರೆ ಮುಂದೆ ಹಿಂದುಗಳು ಕೇಸರಿ ಶಾಲು ಧರಿಸುತ್ತಾರೆ ಎಂದು ಹೇಳಿದ ಹೇಳಿಕೆ ನಂತರ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಆರಂಭಿಸಿದ್ದರು. ಹಾಗಾಗಿ ಶಾಸಕರ ಹೇಳಿಕಯೇ ಈ ಸಮಸ್ಯೆಗೆ ಕಾರಣ ಎಂದು ದೂರಿದರು.
| |