ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ನಾಯಕರಿಂದ ಬೆಂಕಿಗೆ ತುಪ್ಪ ಸುರಿಯುವ ಕೆಲಸ- ಗೃಹ ಸಚಿವ

ಬೆಂಗಳೂರು, ಫೆ.9: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಶಾಲಾ ಸಮವಸ್ತ್ರ ಧರಿಸುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಕಾಲೇಜು ಆವರಣದಲ್ಲಿ ರಾಷ್ಟ್ರ ಧ್ವಜ ಹಾರುತ್ತಿರಲಿಲ್ಲ. ಆದರೆ  ಕೆಪಿಸಿಸಿ ಅಧ್ಯಕ್ಷರು, ವಿಧ್ಯಾರ್ಥಿಗಳು ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಏರಿಸಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಇವರ ಈ ಹೇಳಿಕೆ ಬೇಜವಾಬ್ದಾರಿತನದ್ದಾಗಿದ್ದು ಬೆಂಕಿಗೆ ತುಪ್ಪ ಸುರಿಸುವ ಕೆಲಸ ಮಾಡಿದ್ದಾರೆ.

ಒಬ್ಬ ಹಿರಿಯ ಕಾಂಗ್ರೆಸ್ ನಾಯಕ ಇಂಥ ಬೇಜವಾಬ್ದಾರಿ ಹಾಗೂ ಹಸಿ ಸುಳ್ಳು ಹೇಳಿಕೆಯನ್ನು ನೀಡುತ್ತಾರೆಂದರೆ ಅವರ ಉದ್ದೇಶ ಏನಿರಬಹುದು ಎಂದು ಸಾರ್ವಜನಿಕರು ಊಹಿಸುತ್ತಾರೆ ಎಂದರು.
ಈ ವೇಳೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತೀಯ ಭಾವನೆಗಳನ್ನು ತುಂಬಬಾರದು ಎಂದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪ್ರಸಕ್ತ ವಿಪಕ್ಷ ಸ್ಥಾನದಲ್ಲಿದೆ, ಇದೇ ಪ್ರವೃತ್ತಿ ಮುಂದುವರಿಸಿದರೆ, ಇವರ ಪಕ್ಷವನ್ನು ಜನರು ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದರು. ಇದೇ ವೇಳೆ ಅವರು, ನಿನ್ನೆಯ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ, ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಪ್ರೇರಣಾ ಶಕ್ತಿಗಳು ಯಾರಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ಆಗಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!