ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಮುಂದಾದ ಪಾಕಿಸ್ತಾನ: ಭಾರತ ತೀವ್ರ ಆಕ್ರೋಶ
ಲಾಹೋರ್: ಪಾಕಿಸ್ತಾನ ಮತ್ತೆ ತನ್ನ ನೀಚ ಬುದ್ಧ ಪ್ರದರ್ಶನ ಮಾಡಿದ್ದು, ಸಿಖ್ಖರ ಪವಿತ್ರ ಸ್ಥಳ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಯತ್ನಿಸಿದೆ. ಪಾಕ್ ಅಧಿಕಾರಿಗಳ ಈ ಯತ್ನವನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಈ ಕೂಡಲೇ ಈ ಕ್ರಮ ಹಿಂಪಡಯುವಂತೆ ಖಡಕ್ ಎಚ್ಚರಿಕೆ ನೀಡಿದೆ.
ಪಾಕಿಸ್ತಾನದ ಲಾಹೋರ್‌ನ ನೌಲಾಖಾ ಬಜಾರ್‌ನಲ್ಲಿರುವ ಪ್ರಸಿದ್ಧ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ವರದಿಗಳು ಹೊರ ಬೀಳುತ್ತಿದ್ದಂತೆ, ಇದನ್ನು ವಿರೋಧಿಸಿರುವ ಭಾರತ ಸರ್ಕಾರ ಪಾಕಿಸ್ತಾನದ ಹೈಕಮಿಷನ್ ಎದುರು ಸೋಮವಾರ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು, “ಈ ಘಟನೆಯ ಬಗ್ಗೆ ಭಾರತ ಸರ್ಕಾರ ತನ್ನ ಕಳವಳವನ್ನು ವ್ಯಕ್ತಪಡಿಸಿದೆ ಮತ್ತು ಈ ಬಗ್ಗೆ ತನಿಖೆ ನಡೆಸಿ ತಕ್ಷಣ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ. ತಮ್ಮ ಧಾರ್ಮಿಕ ಹಕ್ಕುಗಳು ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ, ಯೋಗಕ್ಷೇಮವನ್ನು ಕಾಪಾಡುವಂತೆ ಪಾಕಿಸ್ತಾನವನ್ನು ಕೇಳಿಕೊಳ್ಳಲಾಗಿದೆ”. ಲಾಹೋರ್‌ನಲ್ಲಿರುವ “ಶಾಹಿದಿ ಅಸ್ತಾನ್ ಭಾಯಿ ತರು ಜಿ” ಎಂಬುದು ಐತಿಹಾಸಿಕ ಗುರುದ್ವಾರವಾಗಿದ್ದು, ಭಾಯಿ ತರು ಜಿ 1745 ರಲ್ಲಿ ಇದೇ ಜಾಗದಲ್ಲಿ ಹುತಾತ್ಮರಾಗಿದ್ದರು. ಪರಿಣಾಮ ಈ ಗುರುದ್ವಾರವು ಪೂಜ್ಯ ಸ್ಥಳವಾಗಿದ್ದು, ಸಿಖ್ ಸಮುದಾಯದಿಂದ ಪವಿತ್ರವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ಘಟನೆಯನ್ನು ಭಾರತದಲ್ಲಿ ಗಂಭೀರವಾಗಿ ಪರಿಗಣಿಸಿದ್ದು, ಕಾಳಜಿಯಿಂದ ನೋಡಲಾಗಿದೆ. ಅಲ್ಲದೆ, ಪಾಕಿಸ್ತಾನದ ಅಲ್ಪಸಂಖ್ಯಾತ ಸಿಖ್ ಸಮುದಾಯದ ನ್ಯಾಯಕ್ಕಾಗಿ ಕರೆ ನೀಡಲಾಗಿದೆ”ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ.