ಬಂಡೆಗಳ ನಡುವೆ 2 ದಿನ ಅನ್ನಾಹಾರವಿಲ್ಲದೆ ಸಿಲುಕಿದ್ದ ಯುವಕನ ರಕ್ಷಿಸಿದ ಭಾರತೀಯ ಸೇನೆ
ಕೇರಳ ಫೆ.9: ಇಲ್ಲಿನ ಪಾಲಕ್ಕಾಡ್‌ನ ಪರ್ವತದಲ್ಲಿ ಬಂಡೆಗಳ ನಡುವೆ 2 ದಿನಗಳಿಂದ ಅನ್ನ, ಆಹಾರವಿಲ್ಲದೆ ಸಿಲುಕಿಕೊಂಡಿದ್ದ ಯುವಕನನ್ನು ಭಾರತೀಯ ಸೇನೆ ರಕ್ಷಿಸಿದೆ.
ಆರ್. ಬಾಬು ರಕ್ಷಿಸಲ್ಪಟ್ಟ ಯುವಕ. ಈತ ಪಾಲಕ್ಕಾಡ್‌ನ ಪರ್ವತದಲ್ಲಿ ಸೋಮವಾರದಿಂದ ಬಂಡೆಗಳ ನಡುವೆ ಸಿಕ್ಕಿಬಿದ್ದಿದ್ದು, ಸೇನೆಯ ಮ್ಯಾರಥಾನ್ ಪ್ರಯತ್ನದ ನಂತರ ಇಂದು ಬೆಳಗ್ಗೆ ರಕ್ಷಿಸಲಾಗಿದೆ. ಆರ್.ಬಾಬು ಸೋಮವಾರ ಇಬ್ಬರು ಸ್ನೇಹಿತರೊಂದಿಗೆ ಮಲಂಪುಳದ ಚೇರಾದ್ ಬೆಟ್ಟವನ್ನು ಏರಿದ್ದಾರೆ. ಗೆಳೆಯರು ಪ್ರಯತ್ನ ಕೈಬಿಟ್ಟ ನಂತರವೂ ಬಾಬು ಬೆಟ್ಟ ಹತ್ತುತ್ತಲೇ ಇದ್ದು, ಮೇಲಕ್ಕೆ ತಲುಪಿದರೂ ಕಾಲು ಜಾರಿ ಎರಡು ಬಂಡೆಗಳ ನಡುವೆ ಸಿಕ್ಕಿ ಬಿದ್ದಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.
ಪಾಲಕ್ಕಾಡ್‌ನಲ್ಲಿ ಒಂದು ದಿನಕ್ಕಿಂತ ಹೆಚ್ಚು ಸಮಯದಿಂದ ನೀರು ಮತ್ತು ಆಹಾರವಿಲ್ಲದೆ ಬಿಸಿಲಿನ ತಾಪದಲ್ಲಿ ಬಂಡೆಗಳ ನಡುವೆ ಸಿಲುಕಿರುವ ಆರ್.ಬಾಬುನನ್ನು ರಕ್ಷಿಸಲು ಮಂಗಳವಾರ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸೇರಿದಂತೆ ಹಲವು ರೀತಿಯಲ್ಲಿ ಪ್ರಯತ್ನ ಮಾಡಲಾಗಿತ್ತು. ಇದೀಗ ಸತತ ಪ್ರಯತ್ನದ ಬಳಿಕ ಇಂದು ಬೆಳಿಗ್ಗೆ ಯುವಕನನ್ನು ರಕ್ಷಿಸಲಾಗಿದೆ.