ಶಿವಮೊಗ್ಗ: ಕೇಸರಿ ಹಾರಿಸಿದ ಧ್ವಜ ಸ್ತಂಭದಲ್ಲಿ ಎನ್ಎಸ್’ಯುಐಯಿಂದ ರಾಷ್ಟ್ರ ಧ್ವಜಾರೋಹಣ
ಶಿವಮೊಗ್ಗ, ಫೆ.9: ಇಲ್ಲಿನ ಬಾಪೂಜಿ ನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಿನ್ನೆ ವಿದ್ಯಾರ್ಥಿಗಳು ಕೇಸರಿ ಧ್ವಜ ಹಾರಿಸಿದ ಘಟನೆ ಬಳಿಕ ಇಂದು ಬೆಳಿಗ್ಗೆ ಇದೇ ಧ್ವಜ ಸ್ತಂಭದಲ್ಲಿ ಎನ್ಎಸ್ ಯುಐ ಕಾರ್ಯಕರ್ತರು ರಾಷ್ಟ್ರ ಧ್ವಜಾರೋಹಣ ಗೈದಿದ್ದಾರೆ.
ಈ ವೇಳೆ ಎನ್ಎಸ್ ಯುಐ ಕಾರ್ಯಕರ್ತರು ವಿದ್ಯಾರ್ಥಿಗಳು ಹಿಜಾಬ್ – ಕೇಸರಿ ವಿಚಾರವನ್ನು ಬದಿಗಿಟ್ಟು ತರಗತಿಗೆ ಹಾಜರಾಗಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿಕೊಂಡರು. ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಇಲ್ಲಿನ ಬಾಪೂಜಿ ನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಬೆಳಗ್ಗೆ ಕೇಸರಿ ಶಾಲು ಧರಿಸಿಕೊಂಡು ಬಂದಿದ್ದ ಕೆಲವು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿರುವ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಸರಿ ಧ್ವಜ ಹಾರಿಸಿದ್ದ ಅದೇ ಧ್ವಜಸ್ತಂಭದಲ್ಲಿ ಇಂದು ಬೆಳಗ್ಗೆ ಶಿವಮೊಗ್ಗ ಎನ್ಎಸ್ ಯುಐ ಕಾರ್ಯಕರ್ತರು ರಾಷ್ಟ್ರ ಧ್ವಜವನ್ನು ಹಾರಿಸಿದರು ಎಂದು ತಿಳಿದು ಬಂದಿದೆ.