| ಕಾರ್ಕಳ ಫೆ.9(ಉಡುಪಿ ಟೈಮ್ಸ್ ವರದಿ): ಮುಡಾರು ಗ್ರಾಮದ ಗಣೇಶ್ ಶೆಟ್ಟಿ ಎಂಬವರ ಕೃಷಿ ತೋಟದ ಜಾಗದ ನೀರು ಹೋಗುವ ಪೈಪನ್ನು ಕಡಿದು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ದೂರಿನ ವಿಚಾರಣೆಗೆಂದು ಕರೆದಿದ್ದ ವೇಳೆ ಗಣೇಶ್ ರವರ ಜೊತೆಗೆ ಬಂದ ಉಮೇಶ್ ಕಲ್ಲೊಟ್ಟೆ ಎಂಬಾತ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ಕಾರ್ಕಳ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ವಿಚಾರವಾಗಿ ಮುಡಾರು ಗ್ರಾಮದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಗಣೇಶ್ ಶೆಟ್ಟಿ ಅವರು ವಿಲ್ಸನ್ ಪಿ.ಎಂ ಎಂಬಾತನ ವಿರುದ್ಧ ಸಾಮಾಜಿಕ ನ್ಯಾಯ ಸಮಿತಿಗೆ ನೀಡಿದ ದೂರಿನ ವಿಚಾರಣೆಗಾಗಿ ಗಣೇಶ್ ಶೆಟ್ಟಿ ಹಾಗೂ ವಿಲ್ಸನ್ ಪಿ.ಎಂ ಅವರನ್ನು ಕರೆಯಲಾಗಿತ್ತು.
ಈ ವಿಚಾರವಾಗಿ ಫೆ.7 ರಂದು ಮುಡಾರು ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವರು ಪಿಡಿಓ ರಮೇಶ್, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಇದ್ದ ವೇಳೆ ಗಣೇಶ್ ಶೆಟ್ಟಿರವರು ಉಮೇಶ್ ಕಲ್ಲೊಟ್ಟೆ ಎಂಬಾತ ನನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದು ಆತನು ತಾನು ಗಣೇಶ್ ಶೆಟ್ಟಿರವರ ಪರವಾಗಿ ಬಂದಿರುವುದಾಗಿ ತಿಳಿಸಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | |