| ಮಂಗಳೂರು ಫೆ.9: ಕೋವಿಡ್ ನ ಮೊದಲ ಎರಡು ಅಲೆಗಳಿಗೆ ಹೋಲಿಸಿದರೆ ಮೂರನೇ ಅಲೆಯ ಪ್ರಭಾವ ಸ್ವಲ್ಪ ಮಟ್ಟಿಗೆ ಕಡಿಮೆ ಇತ್ತಾದರೂ 3ನೇ ಅಲೆಯು ಮಂಗಳೂರಿನಿಂದ ಹೊರಡುವ ವಿಮಾನ ಪ್ರಯಾಣಿಕರ ಮೇಲೆ ಭಾರೀ ಪರಿಣಾಮ ಬೀರಿದೆ.
ಮಂಗಳೂರು ವಿಮಾನ ನಿಲ್ದಾಣದ ಅಂಕಿ ಅಂಶಗಳ ಪ್ರಕಾರ, ಕಳೆದ ಡಿಸೆಂಬರ್‌ನಲ್ಲಿ 1,07,090 ದೇಶೀಯ ಪ್ರಯಾಣಿಕರು ಮತ್ತು 31,279 ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದಂತೆ 1,38,369 ಪ್ರಯಾಣಿಕರು ಇಲ್ಲಿನ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ. ಆದರೆ ಜನವರಿಯಲ್ಲಿ 3ನೇ ಅಲೆಯ ಪ್ರಭಾವ ಹೆಚ್ಚಿದ್ದ ಪರಿಣಾಮ ಕೇವಲ 92,012 ಪ್ರಯಾಣಿಕರು (63,648 ದೇಶೀಯ, 28,364 ಅಂತರರಾಷ್ಟ್ರೀಯ) ಮಾತ್ರ ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದರು ಎಂದು ತಿಳಿದು ಬಂದಿದೆ.
ಇದರೊಂದಿಗೆ ಮಂಗಳೂರಿನಿಂದ ಕಾರ್ಯಾಚರಿಸುತ್ತಿರುವ ವಿಮಾನಗಳ ಸಂಖ್ಯೆಯಲ್ಲಿಯೂ ಇಳಿಮುಖ ವಾಗಿದೆ ಎಂದು ಅಂಕಿಅಂಶಗಳ ಪ್ರಕಾರ ಮಾಹಿತಿ ಲಭ್ಯವಾಗಿದ್ದು, ಈ ಮೂಲಕ ಡಿಸೆಂಬರ್‌ನಲ್ಲಿ 953 ದೇಶೀಯ ವಿಮಾನಗಳು , 219 ಅಂತರಾಷ್ಟ್ರೀಯ ಮತ್ತು 60 ಚಾರ್ಟರ್ಡ್ ವಿಮಾನಗಳು ಇಲ್ಲಿಂದ ಕಾರ್ಯನಿರ್ವಹಿಸಿದ್ದವು. ಆದರೆ ಜನವರಿಯಲ್ಲಿ, 712 ದೇಶೀಯ, 248 ಅಂತರರಾಷ್ಟ್ರೀಯ ಮತ್ತು 44 ಚಾರ್ಟರ್ಡ್ (ಒಟ್ಟು 1,004) ವಿಮಾನಗಳನ್ನು ಮಾತ್ರ ಹಾರಿಸಲಾಯಿತು. ಇನ್ನು ಕಳೆದ ಅಕ್ಟೋಬರ್‌ನಲ್ಲಿ 80,704 ದೇಶೀಯ ಮತ್ತು 39,134 ಅಂತಾರಾಷ್ಟ್ರೀಯ (ಒಟ್ಟು 1,07,190) ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಆ ಅವಧಿಯಲ್ಲಿ, 781 ದೇಶೀಯ, 201 ಅಂತರರಾಷ್ಟ್ರೀಯ ಮತ್ತು 14 ಚಾರ್ಟರ್ಡ್ ವಿಮಾನಗಳು ಕಾರ್ಯನಿರ್ವಹಿಸಿದವು ಎಂದು ತಿಳಿದು ಬಂದಿದೆ. | |