ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳಂದು ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಫೋಟೋ ಕಡ್ಡಾಯ- ಹೈಕೋರ್ಟ್

ಬೆಂಗಳೂರು: ಹೈಕೋರ್ಟ್‌‌ ಸೇರಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇಡುವುನ್ನು ಕಡ್ಡಾಯಗೊಳಿಸಲು ಹೈಕೋರ್ಟ್ ತೀರ್ಮಾನ ಕೈಗೊಂಡಿದೆ.

ಗಣರಾಜ್ಯೋತ್ಸವ ದಿನದಂದು ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್ ಭಾವಚಿತ್ರ ತೆಗೆಸಿ ಅಪಮಾನ ಮಾಡಿದರು ಎಂಬ ವರದಿಗಳ ಬೆನ್ನೆಲ್ಲೆ ಇಂತಹ ಮಹತ್ವದ ತೀರ್ಮಾನವನ್ನು ಹೈಕೋರ್ಟ್ ಕೈಗೊಂಡಿದೆ. ಗಾಂಧೀಜಿಯ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮದಲ್ಲಿಡುವ ಸಂಬಂಧ ಪೂರ್ಣಪೀಠವು ಹಿಂದೆಯೇ ಗೊತ್ತುವಳಿ ಅಂಗೀಕರಿಸಿತ್ತು, ಆದರೆ ಅಂಬೇಡ್ಕರ್ ಭಾವಚಿತ್ರವನ್ನು ಇಡುವುದಕ್ಕೆ ಸಂಬಂಧಿಸಿದ ಪ್ರಕರಣವು ಸುಮಾರು 2 ವರ್ಷದಿಂದ ಪೂರ್ಣಪೀಠದ ಮುಂದೆ ಪರಿಶೀಲನೆಗೆ ಬಾಕಿ ಇತ್ತು. ಇದೀಗ ಪೂರ್ಣಪೀಠ ಒಪ್ಪಿಗೆ ನೀಡಿರುವುದರಿಂದ ಅಂಬೇಡ್ಕರ್ ಭಾವಿಚಿತ್ರ ಇಡಲು ಇದ್ದ ಅಡ್ಡಿ ನಿವಾರಣೆಯಾಗಿದೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಪೂರ್ಣಪೀಠ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸಿಜೆ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ ಸುತ್ತೋಲೆ ಹೊರಡಿಸಿದ್ದಾರೆ.

ಜ.26ರಂದು ಗಣರಾಜ್ಯೋತ್ಸವ, ಆ.15ರಂದು ಸ್ವಾತಂತ್ರ್ಯೋತ್ಸವ ಹಾಗೂ ನ.26ರಂದು ಸಂವಿಧಾನ ದಿನದ ಅಂಗವಾಗಿ ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ, ಕಲಬುರಗಿ ಪೀಠಗಳು ಹಾಗೂ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಆಯೋಜಿಸಲಾಗುವ ಅಧಿಕೃತ ಕಾರ್ಯಕ್ರಮಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿಡಲು ಕ್ರಮ ಕೈಗೊಳ್ಳುವಂತೆ ಆಯಾ ನ್ಯಾಯಾಲಯಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಕಳೆದ ವಾರ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್‌ ಅಂಬೇಡ್ಕರ್‌ ಭಾವಚಿತ್ರ ತೆಗೆಸಿ ಅಪಮಾನ ಮಾಡಿದ್ದಾರೆನ್ನಲಾದ ಆರೋಪ ಸಂಬಂಧ ವರದಿ ತರಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ಈ ಹಿಂದೆ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಬುಧವಾರ ಧ್ವಜಾರೋಹಣ ನಡೆಯುತ್ತಿದ್ದ ಸ್ಥಳದಲ್ಲಿ ಡಾ.ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಲಾಗಿತ್ತು. ಆದರೆ, ರಾಯಚೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಧ್ವಜಾರೋಹಣ ಸ್ಥಳದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆಸಿದ್ದರು. ನಂತರ ಆ ಸಂಬಂಧ ಅವರು ಸ್ಪಷ್ಟನೆ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!