ಹಿಜಾಬ್ ವಿವಾದ: ಅಮಾನವೀಯ ಎಂದ ಸಿದ್ದರಾಮಯ್ಯ, ವಿಚಾರವನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ- ಬಿ.ಸಿ.ನಾಗೇಶ್

ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಹಿಜಾಬ್ ಹಾಗೂ ಕೇಸರಿ ವಸ್ತ್ರಧಾರಣೆ ವಿವಾದ ತಾರಕಕ್ಕೇರಿದ್ದು, ಇದೀಗ ಈ ವಿವಾದ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. 

ಮುಸ್ಲಿಂ ಹೆಣ್ಣುಮಕ್ಕಳಿಗೆ ತರಗತಿಗಳಿಗೆ ಅವಕಾಶ ನೀಡದಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಹೇಳಿದರೆ, ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ವಿವಾದ ಕುರಿತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಹೆಣ್ಣು ಮಕ್ಕಳನ್ನು ತರಗತಿಗೆ ಹೋಗದಂತೆ ತಡೆಯುವುದು ಅಮಾನವೀಯ ಮತ್ತು ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಿಸುವ ಪ್ರಯತ್ನ ಇದಾಗಿದೆ. “ಅವರು ಹಿಜಾಬ್ ಧರಿಸಿದರೆ ಏನು ಸಮಸ್ಯೆ? ಸರಕಾರ ಪಿಯು ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸದಿರುವಾಗ ಕಾಲೇಜಿಗೆ ಸಮವಸ್ತ್ರ ಕಡ್ಡಾಯಗೊಳಿಸುವಂತೆ ಶಾಸಕರು ಹೇಗೆ ನಿರ್ದೇಶನ ನೀಡುತ್ತಾರೆ? ಎಂದು ಗುಡುಗಿದರು.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಇದು ಸಮುದಾಯಗಳನ್ನು ಒಡೆಯುವ ಆಡಳಿತ ಪಕ್ಷದ ಪಿತೂರಿ ಎಂದು ಬಣ್ಣಿಸಿದ್ದಾರೆ. ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿರುವಾಗ ಹೇಳಿಕೆ ನೀಡುವುದು ಸರಿಯಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಸಿದ್ದರಾಮಯ್ಯ ಹಿರಿಯ ಮುದ್ಸದ್ದಿ. ಕಾನೂನು ಗೊತ್ತಿರುವವರು. ಅವರು ಈ ರೀತಿ ಸುಳ್ಳು ಹೇಳಿದರೆ ದುಃಖವಾಗುತ್ತದೆ. ವೋಟ್ ಬ್ಯಾಂಕ್ ಗಾಗಿ ಹೀಗೆ ಮಾತಾಡಿದ್ರಾ ಅಥವಾ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೀಗೆ ಹೇಳಿದರ ಅವರೇ ಹೇಳಬೇಕು. ಅವರು ಒಮ್ಮೆ ಶಿಕ್ಷಣ ನಿಯಮಗಳನ್ನು ಓದಿಕೊಳ್ಳಲಿ. ಕೆಲವು ಪಕ್ಷಗಳಳಿಗೆ ರಾಷ್ಟ್ರದ ಪ್ರಗತಿ, ಏಕತೆಯ ಬಗ್ಗೆ ಕಾಳಜಿ ಇಲ್ಲ. ಮತಗಳೆ ಅವರಿಗೆ ಮುಖ್ಯ. ಸ್ವ-ಹಿತಕ್ಕಾಗಿ ಯಾರು ಹೇಗೆ ಬೇಕಾದರೂ ಇರಲು ಬಿಡುತ್ತಾರೆ. ಹಲವು ವರ್ಷಗಳಿಂದ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಕಾನೂನು ಓದಿರುವ ಸಿದ್ದರಾಮಯ್ಯ ದಿಕ್ಕು ತಪ್ಪಿಸುತ್ತಿದ್ದಾರೆ. 2018ರಲ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಈ ಸಂಬಂಧ ನಿಯಮ ರೂಪಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಸಮವಸ್ತ್ರ ತಂದಿದ್ದಲ್ಲ ಎಂದು ಕುಟುಕಿದರು. 

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಮಾತನಾಡಿ, ಒಂದು ಧರ್ಮದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ. ಕರ್ನಾಟಕವನ್ನು ಮತ್ತೊಂದು ತಾಲಿಬಾನ್ ರಾಜ್ಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. “ಶುಲ್ಕವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ವಿದ್ಯಾರ್ಥಿಗಳ ಒಂದು ವಿಭಾಗವು ನ್ಯಾಯಾಲಯದ ಮೊರೆ ಹೋಗಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕ್ಯಾಂಪಸ್‌ಗಳಲ್ಲಿ ಸಾಮರಸ್ಯವನ್ನು ಕದಡಲು ಪ್ರಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ,” ಎಂದು ತಿಳಿಸಿದ್ದಾರೆ.

ಕಾಶ್ಮೀರದಲ್ಲಿರುವ ನಾಯಕರು ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಿರುವುದು ಈ ವಿಚಾರದಲ್ಲಿ ದೊಡ್ಡ ಜಾಲವೇ ಇದೆ ಎಂಬುದನ್ನು ಸಾಬೀತುಪಡಿಸುತ್ತಿದೆ. ರಾಜ್ಯ ಸರ್ಕಾರ ಇದನ್ನು ಇನ್ನಷ್ಟು ಉಲ್ಬಣಿಸಲು ಬಿಡುವುದಿಲ್ಲ ಎಂದಿದ್ದಾರೆ.

ಆರ್‌ಡಿಪಿಆರ್‌ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ‘ಹಿಂದೂ-ಮುಸಲ್ಮಾನರು ಸಹೋದರ ಸಹೋದರಿಯರಂತೆ. ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ಅವರ ಧರ್ಮದ ಆಧಾರದ ಮೇಲೆ ಪ್ರತ್ಯೇಕಿಸಿದರೆ, ಅದು ಅವರ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. ಮಕ್ಕಳು ಶಿಕ್ಷಣಕ್ಕಾಗಿ ಶಾಲಾ-ಕಾಲೇಜುಗಳಿಗೆ ಹೋಗುತ್ತಾರೆ. ಅದರಲ್ಲಿ ಧರ್ಮವನ್ನು ಏಕೆ ಎಳೆಯಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!