ಕೊರೋನಾ ಸೂತಕದಲ್ಲಿ ಸರ್ಕಾರದ ಸಂಭ್ರಮಾಚರಣೆ: ಡಿಕೆ ಶಿ ಟೀಕೆ
ಬೆಂಗಳೂರು: ಕೊರೋನಾ ಸೂತಕದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷದ ಸಂಭ್ರಮಾಚರಣೆ ಮಾಡುತ್ತಿದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಒಂದು ವರ್ಷದ ಸಾಧನೆಯನ್ನು ತನ್ನದೇ ಆದ ರೀತಿಯಲ್ಲಿ ಡಿ.ಕೆ. ಶಿವಕುಮಾರ್ ಕವನ ವಾಚಿಸಿ ಲೇವಡಿ ಮಾಡಿದರು. “ಒಂದು ವರ್ಷದ ಬಿ.ಎಸ್. ಯಡಿಯೂರಪ್ಪ ನ ಆಟವೇ ಆಟ. ಒಂದನೇ_ತಿಂಗಳು ಮಂತ್ರಿಮಂಡಲ ಇಲ್ಲದೆ ತಿರುಗಾಟ. ಎರಡನೇ_ತಿಂಗಳು ನೆರೆ ಪರಿಹಾರ ಕೊಡದೆ ನರಳಾಟ. ಮೂರನೇ ತಿಂಗಳು ಉಪಚುನಾವಣೆ ಎಂಬ ಬಯಲಾಟ. ನಾಲ್ಕನೇ ತಿಂಗಳುಮಂತ್ರಿ ಮಂಡಲ ಎಂಬ ದೊಂಬರಾಟ. ಐದು_ಆರರಲ್ಲಿ ಮಂತ್ರಿಗಿರಿಗಾಗಿ ಕಿತ್ತಾಟ. ಏಳು_ಎಂಟರ ತಿಂಗಳಲ್ಲಿ ಕೋರೋಣ ಲಾಕ್ ಡೌನ್ ಎಂಬ ಹೊರಳಾಟ. ಒಂಬತ್ತು_ಹತ್ತು ಕೊರೋನ ಕೋರೋನ ಎಂಬ ಕಿರುಚಾಟ. ಹನ್ನೊಂದು ಹನ್ನೆರಡನೇ ತಿಂಗಳು ಜನ ಸಾಮಾನ್ಯರಿಗೆ ಮಾತ್ರ ಸಾವು ಬದುಕಿನ ಆಟ”. ಎಂದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ತಿಂಗಳಿಂದ ವಿಧವಾ ವೇತನ, ವೃದ್ಧಾಪ್ಯ ವೇತನ, ನೀಡಿಲ್ಲ. ಗ್ರಾಮೀಣ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಸರ್ಕಾರ ಅಗಾಧ ಸಾಧನೆ ಮಾಡಿದೆ ಎಂದು ಹೇಳುತ್ತಿದೆ. ಹಿಂದಿನ ಸರ್ಕಾರದ ಯೋಜನೆಗಳನ್ನು ರದ್ದು ಮಾಡಿರುವುದೇ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಯಾಗಿದೆ, ಆಪರೇಷನ್ ಕಮಲ, ಉಪಚುನಾವಣೆಯಲ್ಲಿ ಸರ್ಕಾರ ವಾಮಮಾರ್ಗದಿಂದ ಗೆಲುವು ಸಾಧಿಸಿ ಖರೀದಿಸಿದ ಶಾಸಕರನ್ನು ಮಂತ್ರಿ ಮಾಡಿರುವುದು ಸಣ್ಣ ಸಾಧನೆಯೇನಲ್ಲ ಎಂದು ಟೀಕಿಸಿದರು.
ಒಂದು ವರ್ಷ ಬರೀ ಸುಳ್ಳುಗಳನ್ನು ಹೇಳಿ ಕಿವಿಗೆ ಇಂಪಾಗುವಂತೆ ಮಾತನಾಡಿದ್ದಾರೆ. ವಾಸ್ತವವಾಗಿ ಅವರು ಏನುಹೇಳಿದ್ದರೋ ಅದನ್ನು ಮಾಡಲೇ ಇಲ್ಲ. ಪ್ರವಾಹಕ್ಕೆ ಸಿಲುಕಿರುವ ಜನರಿಗೆ ಮನೆ ಕಟ್ಟಿ ಕೊಡುವುದಾಗಿ ಹೇಳಿದ್ದರು. ಆದರೆ ಆ ಭಾಗದ ಜನರಿಗೆ ಇನ್ನೂ ಪರಿಹಾರ ದೊರೆತಿಲ್ಲ. 35 ಸಾವಿರ ಕೋಟಿ ನಷ್ಟ ಆಗಿದೆ ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ ಅಲ್ಲಿಂದ ಬಂದಿರುವುದು ಕೇವಲ 1600 ಕೋಟಿ ಮಾತ್ರ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ 5 ಸಾವಿರ ಕೋಟಿ ಮಧ್ಯಂತರ ಪರಿಹಾರ ಕೇಳಿದ್ದರೂ ಅದೂ ಬರಲಿಲ್ಲ ಎಂದು ಆರೋಪಿಸಿದರು.
ಈಗ ಕೊರೋನಾ ಸಂದರ್ಭದಲ್ಲಿ ಎಲ್ಲ ವರ್ಗದವರಿಗೆ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದೇವು. ಸರ್ಕಾರ ಯಾರಿಗೆ ಎಷ್ಟು ಪರಿಹಾರ ಕೊಟ್ಟಿದೆ, ಇದುವರೆಗೂ ಯಾರಿಗೆ ಎಷ್ಟು ತಲುಪಿದೆ ಎಂದು ಸರ್ಕಾರ ಹೇಳಬೇಕು. ರೈತರಿಗೆ ಸಾವಿರಾರು ಕೋಟಿ ಪರಿಹಾರ. ಬೆಂಬಲ ಬೆಲೆ ಕೊಟ್ಟಿದ್ದೇವೆ ಎಂದು ಹೇಳುತ್ತಿದೆ. ಯಾವ ರೈತರಿಗೆ ಇದನ್ನು ತಲುಪಿಸಲಾಗಿದೆ ಎನ್ನುವ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಕೊರೋನಾ ಸಂಕಷ್ಟದಿಂದ ಜನರನ್ನು ರಕ್ಷಿಸಲೆಂದು ಸರ್ಕಾರಕ್ಕೆ ಸಹಕಾರ ನೀಡಿದ್ದೇವು. ಆದರೆ ಈ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಸರ್ಕಾರದ ಭ್ರಷ್ಟಾಚಾರಕ್ಕೆ ಸಹಕಾರ ಕೊಡುವುದಿಲ್ಲ.ಪ್ರಧಾನಿ ಮೋದಿ ತಮ್ಮ ಹಿಂದಿನ ಸರ್ಕಾರದ ಬಗ್ಗೆ ಶೇ 10% ಸರ್ಕಾರ ಎಂದು ಹೇಳಿದ್ದರು. ಆದರೆ ಅವರ ಮಂತ್ರಿಗಳು ಈಗ ಪ್ರತಿ ಇಲಾಖೆಯಲ್ಲಿ ಲೂಟಿ .ಇದೇ ಅವರ ಆಡಳಿತ ವೈಖರಿ. ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ಆಗಿದ್ದರೆ ಅದನ್ನೂ ಬಯಲಿಗೆ ತನ್ನಿ. ಮಂತ್ರಿಗಳು ಎಷ್ಟು ಪರ್ಸೆಂಟೇಜ್ ಕೇಳುತ್ತಿದ್ದಾರೆ ಎನ್ನುವ ಬಗ್ಗೆ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದರು.
ಬಿಐಇಸಿ ಕೊರೋನಾ ಕೇಂದ್ರ ದಲ್ಲಿ 10100 ಬೆಡ್ ಎಂದು ಸರ್ಕಾರದ ಸಚಿವರು ಹೇಳಿದ್ದರಾದರೂ ಅದೇ ಸರ್ಕಾರದ ಅಧಿಕಾರಿಗಳು 6000 ಬೆಡ್ ಎಂದು ಮಾಹಿತಿ ನೀಡಿದ್ದಾರೆ. ಇಂತಹ ವ್ಯತ್ಯಾಸವನ್ನು ವಿಪಕ್ಷ ನಾಯಕರು ಕೇಳಬಾರದೇ?. ಭ್ರಷ್ಟಾಚಾರದ ಆರೋಪ ಬಂದ ತಕ್ಷಣ ಐವರು ಸಚಿವರು ಮೊದಲು 323 ಕೋಟಿ ಖರ್ಚಾಗಿದೆ ಎಂದು ಹೇಳಿದ್ದರು. ಆ ಮೇಲೆ 2000 ಕೋಟಿ ಖರ್ಚಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮಾಸ್ಕ್ ಗಳಿಗೆ 250 ರೂ. ಸ್ಯಾನಿಟೈಸರ್ ಗಳಿಗೆ 500-600 ರೂ ಹಾಕಿದ್ದಾರೆ. ಇವರ ಹಗರಣ ಇಡೀ ದೇಶದಲ್ಲಿ ಕರ್ನಾಟಕ ಬೆತ್ತಲೆಯಾಗುವಂತೆ ಮಾಡಿದೆ. ಕೊರೋ ಸಂದರ್ಭದಲ್ಲಿ ಕಾರ್ಮಿಕರಿಗೆ ಸರಿಯಾದ ರಕ್ಷಣೆ, ಭರವಸೆ ನೀಡಿದ್ದರೆ ಅವರು ರಾಜ್ಯ ಬಿಟ್ಟು ಹೋಗುತ್ತಿರಲಿಲ್ಲ. ರಾಜ್ಯದ ಅಭಿವೃದ್ಧಿ ಶೂನ್ಯ ಆಗಿದೆ.ರಾಜ್ಯದ ಖರೀದಿ ಹಗರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಿ ತನಿಖೆ ನಡೆಸಬೇಕು ಎಂದು ಕೇಂದ್ರವನ್ನು ಆಗ್ರಹಿಸಿದರು.
ಪ್ರಧಾನಿ ಹೇಳಿದಂತೆ ಚಪ್ಪಾಳೆ ತಟ್ಟಿದ್ದೇವೆ. ದೀಪ ಹಚ್ಚಿದ್ದೇವೆ. ಆದರೆ, ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ. ಯಾವ ಪುರುಷಾರ್ಥಕ್ಕೆ ಈ ಸರ್ಕಾರ ಎಂದು ಕಿಡಿಕಾರಿದ ಕೆಪಿಸಿಸಿ ಅಧ್ಯಕ್ಷರು, .ಜನರಿಗೆ ಧೈರ್ಯ ತುಂಬುವ ಜಾಹಿರಾತು ನೀಡಬೇಕೇ ಹೊರತು ಯಾರಿಗೆ ಎಷ್ಟು ಹಣ ತಲುಪಿಸಿದ್ದೀರಿ ಎಂದು ಜಾಹೀರಾತು ಕೊಡುವುದಲ್ಲ ಎಂದರು. ಕುಮಾರಸ್ವಾಮಿ ಅವರು ಕೊರೋನಾ ಪರಿಕರಗಳ ಕುರಿತು ದಾಖಲೆ ಇದ್ದಿದ್ದರೆ ಕಾಂಗ್ರೆಸ್ ನ್ಯಾಯಾಲಯದ ಮೆಟ್ಟಿರಲೇರಬೇಕಿತ್ತು ಎಂದು ಹೇಳಿದ್ದಾರೆ. ಆದರೆ ಅವರ ಪ್ರಶ್ನೆಗೆ ತಾವು ಇವತ್ತು ಉತ್ತರ ಕೊಡಲು ಹೋಗುವುದಿಲ್ಲ. ವಿಪಕ್ಷವಾಗಿರುವ ಕಾಂಗ್ರೆಸ್ ನ ಗುರಿ ಇರುವುದು ಸರ್ಕಾರದ ಮೇಲೆ. ಕುಮಾರಸ್ವಾಮಿ ಅವರು ಸಹ ಒಂದು ಪಕ್ಷ ಮುನ್ನಡೆಸುತ್ತಾರೆ. ಅವರಿಗೂ ಪಕ್ಷದ ಸಿದ್ದಾಂತವಿದೆ. ಆದರೆ ಅವರ ಕಾಲದಲ್ಲಿ ಏನಾಗಿದೆ ಎಂಬುದು ತಮಗೂ ಗೊತ್ತಿದೆ. ಹಿಟ್ ಆಂಡ್ ರನ್ ಮಾಡುವ ರಾಜಕಾರಣಿ ತಾವಲ್ಲ ಎಂದು ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ನುಡಿದರು. ಸರ್ಕಾರದ ವೈಫಲ್ಯ ಖಂಡಿಸಿ ಹಂತ ಹಂತವಾಗಿ ಹೋರಾಟ ನಡೆಸುತ್ತೇವೆ. ನಾವು ಕೊರೋನಾ ಸಲುವಾಗಿ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿದ್ದೇವೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.