ಇನ್ನಾ: ಸೀಲ್‌ಡೌನ್ ನಿಯಮ ಉಲ್ಲಂಘನೆ, ಕಂಪನಿ ವಿರುದ್ಧ ಪ್ರಕರಣ
ಪಡುಬಿದ್ರಿ: ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸದೆ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಇನ್ನಾದ ಕಂಪೆನಿಯೊಂದರ 13 ಸಿಬ್ಬಂದಿ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಜರಕಟ್ಟೆ ಬ್ರೈಟ್ ಫ್ಲೆಕ್ಸ್ ಇಂಟರ್ ನ್ಯಾಷನಲ್ ಕಂಪನಿಯ ಕೆಲ ನೌಕರರಿಗೆ ಕೋವಿಡ್ ಸೋಂಕು ದೃಢಪಟ್ಟ ಕಾರಣ ಕಂಪನಿಯನ್ನು ಇದೇ 21 ರಂದು ಸೀಲ್‌ಡೌನ್ ಮಾಡಲಾಗಿತ್ತು. ಆದರೂ ಕಂಪನಿಯ ಕೆಲವರು ಸೀಲ್‌ಡೌನ್ ಉಲ್ಲಂಘಿಸಿ ಬೇರೆಡೆ ತೆರಳಲು ಅವಕಾಶ ನೀಡಿದ ಬಗ್ಗೆ ಗ್ರಾಮ ಪಂಚಾಯಿತಿಗೆ ಬಂದ ದೂರಿನಂತೆ 24 ರಂದು ಕಂಪನಿಗೆ ನೋಟಿಸ್ ನೀಡಲಾಗಿತ್ತು.ಅದೇ ದಿನ ಕೆಲವು ಕಾರ್ಮಿಕರನ್ನು ಕೋವಿಡ್ -19 ಪರೀಕ್ಷೆಗೂ ಒಳಪಡಿಸಲಾಗಿದ್ದು, 36 ಮಂದಿಗೆ ಸೋಂಕು ದೃಢಪಟ್ಟಿತ್ತು.
‘ನಿಯಮ ಉಲ್ಲಂಘಿಸಿ ಸೋಂಕು ಹರಡಲು ಕಂಪನಿಯ ಎ.ಕೆ ಬನ್ಸಾಲ್, ಅಂಕಿತ್ ಕುಮಾರ್ ಬನ್ಸಾಲ್, ಅಭಿನವ್ ಕುಮಾರ್ ಬನ್ಸಾಲ್, ಮಹೇಂದ್ರ ಗಾಂಧಿ, ಟಿ.ಎಸ್ ಗುಪ್ತ, ಗಣೇಶ್ ಪೈ, ಅನಿಲ್ ಪಾಲನ್, ದುದೆರ್ ಶರ್, ಮುನ್ನಕುಮಾರ್, ಪ್ರತಾಪ್ ನಾಯ್ಕ್, ಸಚಿನ್ ಕುಮಾರ, ಶಿಕಂದರ್ ರಾಯ್, ಬಬನ್ ನಾಯ್ಕ್ ಕಾರಣವಾಗಿದ್ದಾರೆ’ ಎಂದು ಆರೋಪಿಸಿ ಕಾರ್ಕಳ ತಾಲ್ಲೂಕು ಗ್ರಾಮೀಣ ಕೋವಿಡ್-19 ಜಾಗೃತ ದಳ ಅಧಿಕಾರಿ ಡಾ.ಎಚ್. ಸುಬ್ರಹ್ಮಣ್ಯ ಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
‘ದುದೆರ್‌ಶರ್, ಮುನ್ನಕುಮಾರ್, ಪ್ರತಾಪ್ ನಾಯ್ಕ್, ಸಚಿನ್ ಕುಮಾರ, ಶಿಕಂದರ್ ರಾಯ್, ಬಬನ್ ನಾಯ್ಕ್ ಕಂಪನಿ ಆವರಣದಿಂದ ನಾಪತ್ತೆಯಾಗಿದ್ದು, ಅವರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.