| ಚೆನ್ನೈ ಜ.27: ತಮಿಳುನಾಡಿನ 17 ವರ್ಷದ ಶಾಲಾ ಬಾಲಕಿಯ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದು ಕೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ಹೊಸ ವೀಡಿಯೋವೊಂದು ಹರಿದಾಡುತ್ತಿದ್ದು ಅದರಲ್ಲಿ ಬಾಲಕಿ ತನಗೆ ಕಡಿಮೆ ಅಂಕಗಳು ದೊರೆಯಬಹುದೆಂದು ಭೀತಿಯಿಂದ ‘ವಿಷ ಸೇವಿಸಿರುವುದಾಗಿʼ ಹೇಳುವುದು ಕೇಳಿಸುತ್ತದೆ. ಇದರೊಂದಿಗೆ ವೀಡಿಯೋದಲ್ಲಿ ಬಾಲಕಿ ಕಲಿಕೆಯಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ, ಹಾಸ್ಟೆಲ್ ವಾರ್ಡನ್ ತನಗೆ ಹಾಸ್ಟೆಲ್ ಶುಚಿಗೊಳಿಸುವುದು, ಲೆಕ್ಕಪತ್ರ ನೋಡಿಕೊಳ್ಳುವುದು ಹೀಗೆ ಬೇರೆ ಕೆಲಸ ವಹಿಸಿದ್ದರು ಎಂದು ಆಕೆ ಹೇಳುವುದು ಕೇಳಿಸುತ್ತದೆ.
ಇದೀಗ ಈ ಹೊಸ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಹಿಂದೆ ಈ ಪ್ರಕರಣವನ್ನು ಬಲವಂತದ ಮತಾಂತರ ಎಂದು ಬಿಂಬಿಸಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರನ್ನು ಬಂಧಿಸಬೇಕೆಂದು #arrestannamalai ಎಂಬ ಹ್ಯಾಶ್‌ಟ್ಯಾಗ್ ನೊಂದಿಗೆ ಟ್ವಿಟರ್ ಮೂಲಕ ನೆಟ್ಟಿಗರು ಆಗ್ರಹಿಸಿದ್ದಾರೆ. ಆದರೆ ಸದ್ಯ ವೈರಲ್ ಆಗಿರುವ ಈ ವೀಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಈ ಘಟನೆಗೆ ಸಂಬಂಧಿಸಿ ಇದಕ್ಕೂ ಮುಂಚೆ ಹರಿದಾಡಿದ ವೀಡಿಯೋದಲ್ಲಿ ಆಕೆ ತನ್ನ ಹಾಸ್ಟೆಲ್ ವಾರ್ಡನ್ ತನ್ನನ್ನು ನಿಂದಿಸಿದ್ದಾರೆ ಹಾಗೂ ತನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೈಯ್ಯುವ ಯತ್ನದ ಬಗ್ಗೆ ಮಾತನಾಡಿದ್ದಳು. ಈ ವಿಚಾರವಾಗಿ ಆಕೆಯ ಹೆತ್ತವರ ಹೇಳಿಕೆಯನ್ನು ದಾಖಲಿಸುವಂತೆ ಮದ್ರಾಸ್ ಹೈಕೋರ್ಟ್‍ನ ಮಧುರೈ ಪೀಠ ಆದೇಶಿಸಿದೆ. ಆಕೆಯ ಹೇಳಿಕೆ ಕುರಿತ ವೀಡಿಯೋ ಚಿತ್ರೀಕರಿಸಿದ ವ್ಯಕ್ತಿ ತನ್ನ ಫೋನ್ ಅನ್ನು ಫೊರೆನ್ಸಿಕ್ ತಪಾಸಣೆಗೆ ಹಾಜರುಪಡಿಸಬೇಕೆಂದೂ ನ್ಯಾಯಾಲಯ ಸೂಚಿಸಿದೆ. ಹುಡುಗಿಯ ಹೇಳಿಕೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ವ್ಯಕ್ತಿಗೆ ಯಾವುದೇ ಕಿರುಕುಳ ನೀಡದಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆಯಲ್ಲದೆ ಬದಲು ಆಕೆಯ ಆತ್ಮಹತ್ಯೆಗೆ ಕಾರಣಗಳೇನು ಎಂಬ ಕುರಿತು ತನಿಖೆಗೆ ಒತ್ತು ನೀಡುವಂತೆ ಸೂಚಿಸಿದೆ.
ಸದ್ಯ ಬಾಲಕಿಯ ಹೇಳಿಕೆ ಕುರಿತು ಚಿತ್ರೀಕರಿಸಿದ ಫೋನ್ ಪೊಲೀಸರ ವಶದಲ್ಲಿದ್ದು, ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹಾಸ್ಟೆಲ್ ವಾರ್ಡನ್‍ನನ್ನು ಬಂಧಿಸಲಾಗಿದೆ. ಆದರೆ ಪ್ರಕರಣವನ್ನು ಬಲವಂತದ ಮತಾಂತರದ ಕಾರಣ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು ಎಂಬಂತೆ ತಮಿಳುನಾಡು ಬಿಜೆಪಿ ಬಿಂಬಿಸಿತ್ತು. ಬಾಲಕಿ ಜನವರಿ 9ರಂದು ತಂಜಾವೂರಿನ ತನ್ನ ನಿವಾಸದಲ್ಲಿ ವಿಷ ಸೇವಿಸಿದ್ದರೆ, ಹತ್ತು ದಿನಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
| |