ಕೋವಿಡ್-19 ಲಸಿಕೆ: ಕೋವಾಕ್ಸಿನ್ ನ ಮೊದಲ ಹಂತದ ಪ್ರಯೋಗದಲ್ಲಿ ‘ಪ್ರೋತ್ಸಾಹದಾಯಕ ಫಲಿತಾಂಶ’
ನವದೆಹಲಿ: ದೇಶದ ಮೊದಲ ಕೋವಿಡ್-19 ಲಸಿಕೆ ಕೋವಾಕ್ಸಿನ್ ನ ಮೊದಲ ಹಂತದ ಮಾನವ ಪ್ರಯೋಗದಲ್ಲಿ ‘ಪ್ರೋತ್ಸಾಹದಾಯಕ ಫಲಿತಾಂಶ’ ಕಂಡುಬಂದಿದೆ ಎಂದು ಲಸಿಕೆಯ ಪ್ರಯೋಗ ತಂಡದ ಪ್ರಧಾನ ಅನ್ವೇಷಕರು ತಿಳಿಸಿದ್ದಾರೆ.
ಕೋವಾಕ್ಸಿನ್ ನ ಮೊದಲ ಹಂತದ ಮಾನವ ಪ್ರಯೋಗ ಮುಗಿದಿದ್ದು, ದೇಶಾದ್ಯಂತ 50 ಜನರಿಗೆ ಈ ಲಸಿಕೆಯನ್ನು ನೀಡಲಾಗಿದ್ದು,
ಪ್ರೋತ್ಸಾಹದಾಯಕ ಫಲಿತಾಂಶ ಕಂಡುಬಂದಿದೆ. ಮೊದಲ ಹಂತದ ಎರಡನೇ ಭಾಗವಾಗಿ ಶನಿವಾರ ಆರು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಲಸಿಕೆ ಪ್ರಯೋಗ ತಂಡದ ಪ್ರಧಾನ ಅನ್ವೇಷಕರಾದ ಡಾ. ಸವೀತಾ ವರ್ಮಾ ತಿಳಿಸಿದ್ದಾರೆ.
ತೆಲಂಗಾಣದ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಮತ್ತು ಜೈಡಸ್ ಕ್ಯಾಡಿಲಾ ಲಸಿಕೆಗಳ ಮಾನವ ಪ್ರಯೋಗಕ್ಕೆ ಮಾತ್ರ ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದೆ. ರೋಹ್ಟಕ್ ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೋವಾಕ್ಸಿನ್ ಮಾನವ ಪ್ರಯೋಗ ಆರಂಭವಾಯಿತು ಎಂದು ಜುಲೈ 17ರಂದು ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಘೋಷಿಸಿದ್ದರು.
ನಂತರ ಮೊದಲ ಹಂತದ ಮಾನವ ಪ್ರಯೋಗ ಜುಲೈ 24ರಂದು ಏಮ್ಸ್ ನಲ್ಲಿ ನಡೆದಿದ್ದು, ದೆಹಲಿಯ 30 ವರ್ಷದ ಯುವಕನಿಗೆ
ಮೊದಲ ಇಂಜೆಕ್ಷನ್ ನೀಡಲಾಗಿದೆ. ಮಾನವ ಪ್ರಯೋಗಕ್ಕಾಗಿ ಏಮ್ಸ್ ನಲ್ಲಿ ಸುಮಾರು 3500 ಸ್ವಯಂ ಸೇವಕರು ಈಗಾಗಲೇ
ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಈ ಪೈಕಿ 22 ಜನರ ತಪಾಸಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಏಮ್ಸ್ ಪ್ರಾಧ್ಯಾಪಕ ಡಾ,ಸಂಜಯ್ ರೈ ತಿಳಿಸಿದ್ದಾರೆ.
ಕೋವಾಕ್ಸಿನ್ ಮೇಲಿನ ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗಕ್ಕಾಗಿ ದೆಹಲಿಯ ಏಮ್ಸ್ ಸೇರಿದಂತೆ 12 ಸ್ಥಳಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಆಯ್ಕೆ ಮಾಡಿದೆ.ಈವರೆಗೂ ಪಾಟ್ನಾದ ಏಮ್ಸ್ ಮತ್ತಿತರ ಕಡೆಗಳಲ್ಲಿ ಮೊದಲ ಮಾನವ ಪ್ರಯೋಗ ಆರಂಭವಾಗಿದೆ.
ಮೊದಲ ಹಂತದಲ್ಲಿ ಆರೋಗ್ಯವಂತ 18ರಿಂದ 55 ವರ್ಷದೊಳಗಿನ 375 ಸ್ವಯಂ ಸೇವಕರ ಮೇಲೆ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಬಹುತೇಕ 100 ಮಂದಿಗೆ ಏಮ್ಸ್ ನಲ್ಲಿಯೇ ನಡೆಸಲಾಗುತ್ತದೆ. ಎರಡನೇ 750 ಸ್ವಯಂಸೇವಕರ ಮೇಲೆ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ 12 ರಿಂದ 65 ವರ್ಷದವರನ್ನು ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಲಸಿಕೆಯ ಸುರಕ್ಷತೆ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಔಷಧಿ ಪ್ರಮಾಣವನ್ನು ಲೆಕ್ಕ ಚಾರ ಮಾಡಲಾಗುತ್ತಿದೆ ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೆರಿಯಾ ತಿಳಿಸಿದ್ದಾರೆ.