ಕಾಪು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ವಂಚಿಸಲು ಯತ್ನಿಸಿದ ಇಬ್ಬರ ಬಂಧನ
ಕಾಪು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ವಂಚಿಸಲು ಯತ್ನಿಸಿದ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಉಪ್ಪೂರು ಸಾಲ್ಮರ ನಿವಾಸಿ ಡಾ.ರಿನೇಟ್ ಸೋನಿಯಾ ಡಿಸೋಜ(37) ಹಾಗೂ ಸಾಲಿಗ್ರಾಮ ಚಿತ್ರಪಾಡಿ ವಿಜಯ ಕೊಠಾರಿ(43) ಬಂಧಿತ ಆರೋಪಿಗಳು. ಡಾ.ರ್ ನೆಟ್ ಮಣಿಪಾಲ ಕೆಎಂಸಿ ಆಸ್ಪತ್ರೆ ಮತ್ತು ಮಣಿಪಾಲ ಮಾಹೆಯಲ್ಲಿ ವೈದ್ಯೆ ಹಾಗೂ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿ, ಜು.13 ರಂದು ಆಕೆ ಮತ್ತು ಆಕೆಯ ಸಹೋದರನಿಗೆ ವಾಹನ ಖರೀದಿಸಲು ಸಾಲ ನೀಡುವಂತೆ ಬ್ಯಾಂಕ್ ಆಫ್ ಬರೋಡಾ ಮೂಡಬೆಟ್ಟು ಶಾಖೆ ದಾಖಲಾತಿಗಳನ್ನು ಸಲ್ಲಿಸಿದ್ದರು. ಅರ್ಜಿಯೊಂದಿಗೆ ಸಲ್ಲಿಸಿದ ಮಣಿಪಾಲ ಮಾಹೆಯ ವೇತನ ಸ್ಲಿಪ್‌ಗಳನ್ನು ಬ್ಯಾಂಕಿನವರು ಪರಿಶೀಲಿಸಿದ್ದು, ಮಾಹೆ ಇ-ಮೇಲ್ ಮೂಲಕ ಬ್ಯಾಂಕಿಗೆ ಸಲ್ಲಿಸಿರುವ ದೃಢಪತ್ರದಿಂದ ಆಕೆ ಈ ಸಂಸ್ಥೆಯಲ್ಲಿ ಉದ್ಯೋಗದಲ್ಲಿ ಇಲ್ಲ ಎಂಬುದು ತಿಳಿದುಬಂದಿದೆ. ಅದರಂತೆ ಜು.24ರಂದು ಬ್ಯಾಂಕ್ ಮೆನೇಜರ್ ಅಲೈನಾ ಡಿಸೋಜಾ ನೀಡಿದ ದೂರಿನಂತೆ ಡಾ.ರಿನೇಟ್ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ, ಆರೋಪಿ ಡಾ.ರಿನೇಟ್ ಡಿಸೋಜ ಜು.24ರಂದು ಬರೋಡಾ ಬ್ಯಾಂಕ್ ಕಟಪಾಡಿ ಶಾಖೆಗೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಕೆ, ನನಗೆ ವಿಜಯ ಕೊಠಾರಿ ಸಾಲಕ್ಕೆ ಅರ್ಜಿ ಸಲ್ಲಿಸಲು ನಕಲಿ ದಾಖಲಾತಿಗಳನ್ನು ಮಾಡಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ವಿಜಯ ಕೊಠಾರಿಯನ್ನು ಬಂಧಿಸಿ, ಆತ ನಕಲಿ ದಾಖಲೆ ತಯಾರಿಸುತ್ತಿದ್ದ ಲ್ಯಾಪ್‌ಟಾಪ್‌ನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಧಿಕ ಮೊತ್ತದ ಸಾಲ ಪಡೆದು ಬ್ಯಾಂಕಿಗೆ ಮೋಸ ಮಾಡುವುದನ್ನು ಬ್ಯಾಂಕಿನ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ತಪ್ಪಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಕಾಪು ಎಸ್ಸೆ ರಾಜಶೇಖರ್ ಬಿ.ಸಾಗನೂರ, ಅಪರಾಧ ವಿಭಾಗದ ಎಸ್ಸೆ ಐ.ಆರ್.ಗಡ್ಡಕರ್, ಪ್ರೊಬೆಷನರಿ ಎಸ್ಪಿ ಅನಿಲ್ ಮಾದಾರ, ಸಿಬ್ಬಂದಿಗಳಾದ ರವಿಕುಮಾರ್, ರಮೇಶ, ಮಹಾಬಲ ಶೆಟ್ಟಿಗಾರ್, ಸುಲೋಚನಾ, ಶ್ರೀನಾಥ್, ಪರಶುರಾಮ, ಅರುಣ್ ಕುಮಾರ್, ಆನಂದ ಭಾಗವಹಿಸಿದ್ದರು. |