| ಹೊಸದಿಲ್ಲಿ ಜ.23 : ಪಾಕ್ ಮೂಲಕ ಅಫ್ಘಾನಿಸ್ತಾನಕ್ಕೆ ಗೋಧಿ ರವಾನೆ ಮಾಡಲು ಭಾರತ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಅತ್ತಾರಿ-ವಾಘ್ ಗಡಿಯಲ್ಲಿ ಭೂಮಾರ್ಗದ ಮೂಲಕ ಅಫ್ಘಾನಿಸ್ತಾನಕ್ಕೆ 50 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಸರಬರಾಜು ಮಾಡಲು ಭಾರತ ಹಾಗೂ ಪಾಕಿಸ್ತಾನ ಒಪ್ಪಂದ ಮಾಡಿಕೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಬರಪೀಡಿತ ಅಫ್ಘಾನಿಸ್ತಾನಕ್ಕೆ ಭಾರತದಿಂದ ಪಾಕಿಸ್ತಾನದ ಭೂಮಾರ್ಗದ ಮೂಲಕ ಗೋಧಿ ಪೂರೈಸಲು, ಸಾವಿರಾರು ಲಾರಿಗಳಲ್ಲಿ ಗೋಧಿಯನ್ನು ಸರಬರಾಜು ಮಾಡುವ ಕಾರ್ಯ ಫೆಬ್ರುವರಿ ಆರಂಭದಲ್ಲಿ ಚಾಲನೆ ಪಡೆಯಲಿದೆ. ಹಾಗೂ ಉಭಯ ದೇಶಗಳ ನಡುವಿನ ಒಡಂಬಡಿಕೆ ಅನ್ವಯ, ವಿಶ್ವಸಂಸ್ಥೆಯ ವರ್ಲ್ಡ್ ಫುಡ್ ಪ್ರೋಗ್ರಾಂ ಅಡಿಯಲ್ಲಿ ಕಾರ್ಯಾಚರಿ ಸುತ್ತಿರುವ ಅಫ್ಘಾನ್ ಟ್ರಕ್ಗಳು ಭಾರತದ ಗೋಧಿಯನ್ನು ಭಾರತ- ಪಾಕಿಸ್ತಾನ ಗಡಿಯಿಂದ ಅಫ್ಘಾನಿಸ್ತಾನಕ್ಕೆ ತೊರ್ಕಮ್ ಗಡಿ ಮೂಲಕ ಒಯ್ಯಲಿವೆ ಎಂದು ತಿಳಿದು ಬಂದಿದೆ.
ಈ ದಿಶೆಯಲ್ಲಿ ವಿಧಿವಿಧಾನಗಳನ್ನು ಅಂತಿಮಪಡಿಸುವ ನಿಟ್ಟಿನಲ್ಲಿ ಎರಡು ತಿಂಗಳಿನಿಂದ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿತ್ತು. ಮುಂದಿನ ತಿಂಗಳ ಎರಡನೇ ವಾರದಲ್ಲಿ ಮೊದಲ ಹಂತದ ಸರಕು ಪೂರೈಸುವ ಕಾರ್ಯಕ್ಕೆ ಸಜ್ಜಾಗಿರುವುದಾಗಿ ಭಾರತ, ಪಾಕಿಸ್ತಾನಿ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಭಾರತ ಇತ್ತೀಚೆಗೆ ಮೂರನೇ ಹಂತದ ನೆರವನ್ನು ಕಳುಹಿಸಿಕೊಟ್ಟಿತ್ತು. ಬಹುತೇಕ ಜೀವರಕ್ಷಕ ಔಷಧಿಗಳನ್ನು ಈ ಕಂತಿನಲ್ಲಿ ವಾಯುಮಾರ್ಗದ ಮೂಲಕ ಕಳುಹಿಸಿ ಕೊಡಲಾಗಿತ್ತು. ಆದರೆ ಗೋಧಿಯನ್ನು ಭೂಮಾರ್ಗದ ಮೂಲಕ ಪೂರೈಸುವ ಭರವಸೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಹದಗೆಟ್ಟ ಸಂಬಂಧದ ಹಿನ್ನೆಲೆಯಲ್ಲಿ ಈಡೇರಿರಲಿಲ್ಲ.
2002ರಲ್ಲಿ ಇಂಥದ್ದೇ ಮಾನವೀಯ ಸಂಕಷ್ಟ ಎದುರಾದ ಸಂದರ್ಭದಲ್ಲಿ ಪಾಕಿಸ್ತಾನ ತನ್ನ ನೆಲದ ಮೂಲಕ ಭಾರತದ ವಸ್ತುಗಳನ್ನು ಸರಬರಾಜು ಮಾಡಲು ಅವಕಾಶ ನೀಡಿರಲಿಲ್ಲ. ಇದೀಗ ಭಾರತದ ಸಕಾಲಿಕ ಸಹಾಯಹಸ್ತವನ್ನು ತಾಲಿಬಾನ್ ಸ್ವಾಗತಿಸಿದ್ದು, ಇದಕ್ಕೆ ತಕ್ಷಣ ಅನುಮೋದನೆ ನೀಡುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಆಗ್ರಹಿಸಿದೆ ಎಂದು ತಿಳಿದು ಬಂದಿದೆ.
| |