ಜಲ್ಲಿ ಕ್ರಷರ್‌ ಸುಗ್ರೀವಾಜ್ಞೆಗೆ ‌ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: “ಕರ್ನಾಟಕ ಜಲ್ಲಿ ಕ್ರಷರ್‌ (ನಿಯಂತ್ರಣ) ಸುಗ್ರಿವಾಜ್ಞೆ-2020” ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತು ಆರ್‌. ಆಂಜನೇಯರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ. ಎ.ಎಸ್‌. ಓಕ್‌ ಹಾಗೂ ನ್ಯಾ. ಎಚ್‌.ಪಿ. ಸಂದೇಶ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಪ್ರಧಾನ ಕಾರ್ಯದರ್ಶಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೆ ಆದೇಶಿಸಿ, ಆ.24ರೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿತು. ಅದೇ ರೀತಿ ಅರ್ಜಿಯಲ್ಲಿ ಸುಗ್ರಿವಾಜ್ಞೆ ಯನ್ನು ಪ್ರಶ್ನಿಸಿರುವುದರಿಂದ ರಾಜ್ಯದ ಅಡ್ವೊಕೇಟ್‌ ಜನರಲ್‌ ಅವರಿಗೂ ನೋಟಿಸ್‌ ಜಾರಿಗೆ ಆದೇಶಿಸಲಾಗಿದೆ.

ಸುಗ್ರಿವಾಜ್ಞೆಯು ನ್ಯಾಯಾಲಯದ ಆದೇಶಗಳಿಗೆ ತದ್ವಿರುದ್ಧವಾಗಿದೆ. ಇದು ಸಂಪೂರ್ಣವಾಗಿ ಉದ್ದಿಮೆದಾರರ ಪರವಾಗಿದ್ದು, ರೈತರು ಮತ್ತು ಜನಸಾಮಾನ್ಯರ ಹಿತಾಸಕ್ತಿಗಳಿಗೆ ಮಾರಕವಾಗಿದೆ. ಆದ್ದರಿಂದ ಸುಗ್ರಿವಾಜ್ಞೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ರಾಜ್ಯದಲ್ಲಿ ಜಲ್ಲಿ ಕ್ರಷರ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಮಗ್ರ ಕಾಯ್ದೆ ರೂಪಿಸುವಂತೆ 1998ರಲ್ಲಿ ಹೈಕೋರ್ಟ್‌ ಆದೇಶಿಸಿತ್ತು. ಅದರಂತೆ ಕರ್ನಾಟಕ ಜಲ್ಲಿ ಕ್ರಷರ್‌ಗಳ ನಿಯಂತ್ರಣ ಕಾಯ್ದೆ-2011ರಲ್ಲಿ ಜಾರಿಗೆ ತರಲಾಯಿತು. ಇದಕ್ಕೆ 2013ರಲ್ಲಿ ತಿದ್ದುಪಡಿ ತರಲಾಗಿತ್ತು. ಇದೀಗ 2011ರ ಮೂಲ ಕಾಯ್ದೆಗೆ ತಿದ್ದುಪಡಿ ತಂದು “ಕರ್ನಾಟಕ ಜಲ್ಲಿ ಕ್ರಷರ್‌ (ನಿಯಂತ್ರಣ) ಸುಗ್ರಿವಾಜ್ಞೆ-2020 ಜಾರಿಗೆ ತಂದು 2020ರ ಮಾ.31ರಂದು ಅಧಿ ಸೂಚನೆ ಹೊರಡಿಸಲಾಗಿದೆ. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಹೈಕೋರ್ಟ್‌ ನಿರ್ದೇಶನಗಳ ಮೇರೆಗೆ ಕಾಯ್ದೆ ರೂಪಿಸಿದ್ದ ಸರ್ಕಾರ ಸುರಕ್ಷತಾ ವಲಯಕ್ಕೆ ಆದ್ಯತೆ ನೀಡಿತ್ತು. ಅದರಂತೆ ಜಲ್ಲಿ ಕ್ರಷರ್‌ಗಳು ಸಾರ್ವಜನಿಕ ಪ್ರದೇಶಗಳಾದ ಶಾಲೆ, ದೇವಸ್ಥಾನ, ಜನ ವಸತಿ ಪ್ರದೇಶದಿಂದ ಕನಿಷ್ಠ 2 ಕಿ.ಮೀ ದೂರವಿರಬೇಕು. ರಾಷ್ಟ್ರೀಯ ಹೆದ್ದಾರಿಯಿಂದ 1.5 ಕಿಮೀ, ಸಂಪರ್ಕ ರಸ್ತೆಗಳಿಂದ ಅರ್ಧ ಕಿ.ಮೀ ದೂರದಲ್ಲಿರಬೇಕು ಎಂದು ನಿಯಮ ರೂಪಿಸಿತ್ತು. ಇದೀಗ ಎಲ್ಲ ನಿಯಮಗಳನ್ನು ಸಡಿಲಿಸಲಾಗಿದ್ದು, ತಿದ್ದುಪಡಿ ಕಾಯ್ದೆಯಡಿ ನಿಯಮಗಳನ್ನು ಕೈಬಿಡಲಾಗಿದೆ. ಸುರಕ್ಷತಾ ವಲಯದಲ್ಲಿಯೂ ಕಡಿತ ಮಾಡಿದ್ದು, ಕೃಷಿ ಭೂಮಿಗೆ ಇದ್ದ 100 ಮೀಟರ್‌ ಅಂತರವನ್ನು 50 ಮೀ. ಗೆ ಇಳಿಸಿದೆ. ಇದು ರೈತರ ತೋಟಗಾರಿಕೆ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೃಷಿಯನ್ನೇ ನಂಬಿರುವ ಶೇ. 80ರಷ್ಟು ರೈತರ ಬದುಕನ್ನು ಅತಂತ್ರಗೊಳಿಸಲಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಕ್ರಷರ್‌ಗಳ ಮಾಲಿನ್ಯ ನಿಯಂತ್ರಿಸಲು ಹಾಗೂ ಸುರಕ್ಷತಾ ವಲಯವನ್ನು ಕಾಪಾಡಲು ಒಂದು ವರ್ಷದ ಅವಧಿಗೆ ಮಾತ್ರ ಪರವಾನಿಗೆ ನೀಡುವ ಮತ್ತು ನಿಬಂಧನೆಗಳನ್ನು ಪಾಲಿಸಿದರೆ ವರ್ಷಕ್ಕೊಮ್ಮೆ ಪರವಾನಿಗೆ ನವೀಕರಿಸಿಕೊಳ್ಳುವ ನಿಯಮವಿತ್ತು. ಆದರೀಗ, ತಿದ್ದುಪಡಿ ಕಾಯ್ದೆ ಪ್ರಕಾರ ಯಾವುದೇ ವ್ಯಕ್ತಿ ತಾನು ಪಡೆದುಕೊಂಡ ಪರವಾನಿಗೆಯನ್ನು ಕಾರಣವಿಲ್ಲದೆಯೂ ಯಾವುದೇ ವ್ಯಕ್ತಿಗೆ ಹಸ್ತಾಂತರಿಸಬಹುದಾಗಿದೆ. ಅಂತೆಯೇ, ಸೆಕ್ಷನ್‌ 5 ರ ಪ್ರಕಾರ ಪರವಾನಿಗೆಯನ್ನು 20 ವರ್ಷದ ಅವಧಿಗೆ ನೀಡಬಹುದಾಗಿದೆ. ನಂತರ 10 ವರ್ಷಗಳ ಸುದೀರ್ಘ‌ ಅವಧಿಗೆ ನವೀಕರಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

1 thought on “ಜಲ್ಲಿ ಕ್ರಷರ್‌ ಸುಗ್ರೀವಾಜ್ಞೆಗೆ ‌ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

  1. Karnataka Jalli crusher (niyanthrana) sugreevajne 2020, is against the orders of the Courts. Farmers, and comman people will face more problems if it is formulated. School, Temple, residential areas should be minimum two kilometres from the Jalli crusher site. For the prevention of the pollution and also to prevent the safety zone, one year licence should be renewed after full fill the rules. One year lease licence should not be transferable to another person. Officers should visit the site and get the no objections from concerned area farmers and general public.

Leave a Reply

Your email address will not be published. Required fields are marked *

error: Content is protected !!