ಉಕ್ಕು, ಸಿಮೆಂಟ್ ಸಹಿತ ಕಚ್ಚಾ ಸರಕು ಬೆಲೆ ಹೆಚ್ಚಳ- ನೂತನ ಸಂಸತ್ ಭವನ ನಿರ್ಮಾಣದ ವೆಚ್ಚ ರೂ. 200 ಕೋಟಿ ಏರಿಕೆ
ನವದೆಹಲಿ: ಉಕ್ಕು, ಎಲೆಕ್ಟ್ರಾನಿಕ್ಸ್ ವಸ್ತು ಮತ್ತು ಸಿಮೆಂಟ್ ಸಹಿತ ಕಚ್ಚಾ ಸರಕು ಬೆಲೆ ಹೆಚ್ಚಳದಿಂದಾಗಿ ನೂತನ ಸಂಸತ್ ಭವನ ಕಟ್ಟಡ ನಿರ್ಮಾಣದ ವೆಚ್ಚದಲ್ಲಿ ರೂ. 200 ಕೋಟಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಲೋಕೋಪಯೋಗಿ ಇಲಾಖೆ ಈ ಕುರಿತಂತೆ ಲೋಕಸಭೆಯ ಕಾರ್ಯಾಲಯದಿಂದ ಅನುಮತಿ ಪಡೆದುಕೊಳ್ಳಲು ಮುಂದಾಗಿದೆ. ಈ ಮೊದಲು ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದುಕೊಳ್ಳುವ ಸಂದರ್ಭದಲ್ಲಿ ಇದ್ದ ವೆಚ್ಚಕ್ಕೆ ಹೋಲಿಸಿದರೆ ಈಗ ಹೆಚ್ಚಳವಾಗಿದೆ. ಹೀಗಾಗಿ ಹೊಸ ದರಕ್ಕೆ ಸಮಿತಿ ಅನುಮೋದನೆ ಪಡೆದುಕೊಳ್ಳಬೇಕಿದೆ.
2020ರಲ್ಲಿ ಟಾಟಾ ಪ್ರಾಜೆಕ್ಟ್ಸ್ಗೆ ನೂತನ ಸಂಸತ್ ಭವನ ನಿರ್ಮಾಣದ ಹೊಣೆಯನ್ನು ವಹಿಸಲಾಗಿತ್ತು. ಅಲ್ಲದೆ, ಆ ಸಂದರ್ಭದಲ್ಲಿ ರೂ.971 ಕೋಟಿ ವೆಚ್ಚಕ್ಕೆ ಅನುಮೋದನೆ ದೊರೆತಿತ್ತು. ಆದರೆ ಕಚ್ಚಾ ಸಾಮಾಗ್ರಿ ದರ ಹೆಚ್ಚಳದಿಂದಾಗಿ, ಪ್ರಸ್ತುತ ಯೋಜನಾ ವೆಚ್ಚ ಅಂದಾಜು ರೂ. 1,200 ಕೋಟಿಗೆ ಏರಿಕೆಯಾಗಲಿದೆ. ಸರ್ಕಾರ, ನೂತನ ಕಟ್ಟಡ ನಿರ್ಮಾಣಕ್ಕೆ 2022ರ ಅಕ್ಟೋಬರ್ ಗಡುವನ್ನು ವಿಧಿಸಿದ್ದು, ಸಂಸತ್ನ ಚಳಿಗಾಲದ ಅಧಿವೇಶನವನ್ನು ಹೊಸ ಸಂಸತ್ ಭವನದಲ್ಲೇ ನಡೆಸುವ ಉದ್ದೇಶ ಹೊಂದಿದೆ.