ಮಕ್ಕಳಿಗೆ ಆ್ಯಂಟಿಬಾಡಿ ಔಷಧ ಬಳಸಬಾರದು- 11 ವರ್ಷದ ಒಳಗೆ ಮಾಸ್ಕ್‌ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್ ಸೋಂಕಿನ ತೀವ್ರತೆ ಎಷ್ಟೇ ಇದ್ದರೂ 18 ವರ್ಷದೊಳಗಿನ ಮಕ್ಕಳಿಗೆ, ಪ್ರತಿಕಾಯ ಸೃಷ್ಟಿಗೆ ಪೂರಕವಾದ ಆ್ಯಂಟಿಬಾಡಿ ಔಷಧಗಳನ್ನು ಬಳಸಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಸ್ಟಿರಾಯ್ಡ್ ಅನ್ನು ಬಳಸುವುದಾದರೂ ಅದು 10 ರಿಂದ 14 ದಿನಕ್ಕೆ ಸೀಮಿತವಾಗಿರಬೇಕು ಎಂದು ಸರ್ಕಾರ ತಿಳಿಸಿದೆ. ಮಕ್ಕಳು ಮತ್ತು ಅಪ್ರಾಪ್ತರಿಗೆ ಸಂಬಂಧಿಸಿದಂತೆ ಕೋವಿಡ್ ನಿರ್ವಹಣೆ ಕುರಿತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಐದು ವರ್ಷ ಮತ್ತು ಅದಕ್ಕೂ ಕೆಳಗಿನ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಪಡಿಸಿಲ್ಲ. 6–11 ವರ್ಷದ ಮಕ್ಕಳು ಮಾಸ್ಕ್‌ ಬಳಸುವ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ, ಪೋಷಕರ ಮೇಲ್ವಿಚಾರಣೆಯಲ್ಲಿ ಬಳಸಬಹುದು. 12 ವರ್ಷ ಮೀರಿದವರು ಕಡ್ಡಾಯವಾಗಿ ವಯಸ್ಕರು ಧರಿಸುವಂತೆಯೇ ಮಾಸ್ಕ್‌ ಧರಿಸಬೇಕು ಎಂದು ಹೇಳಿದೆ. ಓಮೈಕ್ರಾನ್‌ ರೂಪಾಂತರ ತಳಿಯ ಕೋವಿಡ್‌ ಸೋಂಕು ಪ್ರಕರಣ ಏರಿಕೆಯ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯು ಗುರುವಾರ ಕೋವಿಡ್‌ ಮಾರ್ಗಸೂಚಿಗಳನ್ನು ಪರಿಷ್ಕರಿಸಿತು.

ಇತರೆ ದೇಶಗಳಿಗೆ ಸಂಬಂಧಿಸಿದ ಅಂಕಿ ಅಂಶಗಳ ಪ್ರಕಾರ, ಓಮೈಕ್ರಾನ್‌ ಸೋಂಕಿನ ಪರಿಣಾಮ, ತೀವ್ರತೆ ಕಡಿಮೆ ಆಗಿದೆ. ಆದರೂ, ಪ್ರಸ್ತುತ ಏರಿಕೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದೆ.ಅಲ್ಲದೆ, ಸೋಂಕಿನ ತೀವ್ರತೆಯನ್ನು ಸೋಂಕಿನ ಲಕ್ಷಣ ಇಲ್ಲದಿರುವುದು, ಸಾಧಾರಣ, ಗಮನಿಸಬೇಕಾದುದು ಮತ್ತು ತೀವ್ರವಾದುದು ಎಂದು ವರ್ಗೀಕರಿಸಲಾಗಿದೆ. ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಕೋವಿಡ್–19 ಸಾಂಕ್ರಾಮಿಕ ರೋಗ. ಇವುಗಳ ನಿರ್ವಹಣೆಯಲ್ಲಿ ಆ್ಯಂಟಿಮೈಕ್ರೊಬಯುಲ್‌ಗಳ ಪಾತ್ರ ಇಲ್ಲ ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!