ಶಾಲಾ-ಕಾಲೇಜುಗಳು ಧರ್ಮ ಆಚರಿಸುವ ಸ್ಥಳವಲ್ಲ, ತರಗತಿಗಳಲ್ಲಿ ಹಿಜಾಬ್ ಧಾರಣೆ ಅಶಿಸ್ತಾಗುತ್ತದೆ: ಶಿಕ್ಷಣ ಸಚಿವ ನಾಗೇಶ್

ಉಡುಪಿ: ಶಾಲಾ-ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ. 1985 ರಿಂದ ಅನುಸರಿಸುತ್ತಿರುವ ಸಮವಸ್ತ್ರದ ನಿಯಮಗಳಿಗೆ ವಿದ್ಯಾರ್ಥಿಗಳು ಬದ್ಧರಾಗಿರಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಗುರುವಾರ ಹೇಳಿದ್ದಾರೆ. 

ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವ ಕುರಿತು ಉಂಟಾಗಿರುವ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ಸಂಸ್ಥೆಯಲ್ಲಿ ನೂರಾರು ಮುಸ್ಲಿಂ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಅವರಿಗಾರಿಗೂ ಸಮಸ್ಯೆಗಳಿಲ್ಲ. ಕೆಲವು ವಿದ್ಯಾರ್ಥಿಗಳು ಮಾತ್ರ ಪ್ರತಿಭಟನೆಗಿಳಿದಿದ್ದಾರೆ. ಶಾಲೆ ಮತ್ತು ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ. ತರಗತಿಗಳಲ್ಲಿ ಹಿಜಾಬ್ ಧರಿಸುವುದು ಅಶಿಸ್ತಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಕಾಲೇಜಿನಲ್ಲಿ ಏಕರೂಪ ನಿಯಮ ಕುರಿತು ಸಚಿವರು ಹಾಗೂ ಕಾಲೇಜು ಆಡಳಿತ ಮಂಡಳಿ ಒಂದೇ ರೀತಿ ಮಾತನಾಡುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳು ಮಾತ್ರ ಕೆಲ ಆರೋಪಗಳನ್ನು ಮಾಡುತ್ತಿದ್ದಾರೆ. ನಿನ್ನೆ ಕೂಡ ಉಡುಪಿ ಮಹಿಳಾ ಸರ್ಕಾರಿ ಪಿಯು ಕಾಲೇಜಿನ ಕೆಲ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೆಲ ಘೋಷಣಾ ವಾಕ್ಯಗಳನ್ನು ಕೂಗಿರುವ ವಿದ್ಯಾರ್ಥಿಗಳು ನ್ಯಾಯಬೇಕೆಂದು ಆಗ್ರಹಿಸಿದ್ದಾರೆ. 

ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು. ಅದನ್ನು ಕಾಲೇಜು ಆಡಳಿತ ಮಂಡಳಿ ಕಿತ್ತುಕೊಳ್ಳುವಂತಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಅಲ್ಲದೆ, ಈ ಕುರಿತು ದನಿ ಎತ್ತಿದ್ದಕ್ಕೆ ಕಾಲೇಜಿನಲ್ಲಿ ಡಿಸೆಂಬರ್ 31 ರಿಂದಲೂ ತರಗತಿಯಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಲಾಗುತ್ತಿಲ್ಲ. ಕಾಲೇಜಿನಲ್ಲಿ ಉರ್ದುವಿನಲ್ಲಿ ಮಾತನಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಣಿಪಾಲ ವಿವಿಯ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಅವರು, ವಿದ್ಯಾರ್ಥಿಗಳು ಮುಖ ಕಾಣದಂತೆ ಹಿಜಾಬ್ ಧರಿಸುವುದು ಸಮವಸ್ತ್ರ ನಿಯಮದ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಹಿಜಾಬ್ ಧಾರಣೆ ಒಂದು ಧಾರ್ಮಿಕ ಬಲವಂತವಾಗಿರಬಹುದು, ಆದ್ದರಿಂದ ಒಬ್ಬರ ಧಾರ್ಮಿಕ ನಂಬಿಕೆಯಂತೆ ನಡೆಯುವುದು ಸರಿಯಲ್ಲ. ಅಲ್ಲದೆ, ಸಿಖ್ಖರು ಪೇಟವನ್ನು ಹೇಗೆ ಧರಿಸುತ್ತಾರೆಯೋ ಹಾಗೆ ಅನೇಕ ಇತರ ನಂಬಿಕೆಗಳಿವೆ. ಹಿಜಾಬ್ ಅನ್ನು ಅಂತಹ ದೃಷ್ಟಿಕೋನದಿಂದ ನೋಡಬೇಕು. ಈಗಾಗಲೇ ಶಾಲೆ ಕಾಲೇಜುಗಳಲ್ಲಿ ಏಕರೂಪದ ಸಮವಸ್ತ್ರ ನಿಯಮ ಜಾರಿಯಲ್ಲಿದ್ದು, ಈ ನಿಯಮದ ವಿರುದ್ಧ ಹೋಗಬಾರದು ಎಂದು ತಿಳಿಸಿದ್ದಾರೆ. 

ಈ ನಡುವೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರ ನಿರ್ದೇಶನದ ಮೇರೆಗೆ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಾಜು ಅವರು ಬುಧವಾರ ಕಾಲೇಜಿಗೆ ಆಗಮಿಸಿ ಡಿಡಿಪಿಯು ಹಾಗೂ ಕಾಲೇಜು ಪ್ರಾಂಶುಪಾಲ ರುದ್ರಗೌಡ ಅವರೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಸಹಾಯಕ ಆಯುಕ್ತರು ಮಾತುಕತೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!