ಶಿರ್ವ: ಸ್ನೇಹಿತನ ಹತ್ಯೆಗೈದು ಸುಟ್ಟ ಆರೋಪಿಗೆ ನ್ಯಾಯಾಂಗ ಬಂಧನ

ಶಿರ್ವ: (ಉಡುಪಿ ಟೈಮ್ಸ್ ವರದಿ) ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಹತ್ಯೆಗೈದು, ತನ್ನ ಮನೆಯ ಅಂಗಳದಲ್ಲಿ ಸುಟ್ಟ ಪ್ರಕರಣದ ಆರೋಪಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ: ಶುಕ್ರವಾರ ಕೊಲೆಗಿಡಾದ ಎರ್ಮಾಳು ನಿವಾಸಿ ಹೇಮಂತ್ ಪೂಜಾರಿ ತನ್ನ ಸ್ನೇಹಿತ ಅಲ್ಬರ್ಟ್‌ನೊಂದಿಗೆ ಕಾಪುವಿನ ವೈಶಾಲಿ ಬಾರ್‌ನಲ್ಲಿ ಕುಡಿದು ಅಲ್ಬರ್ಟ್‌ನ ಕಳತ್ತೂರಿನ ಪುಂಚಲಕಟ್ಟೆಯ ಮನೆಗೆ ಮಧ್ಯಾಹ್ನ 12.30 ಗಂಟೆಗೆ ಹೋಗಿದ್ದರು. ನಂತರ ಇಬ್ಬರಲ್ಲಿ ಯಾವುದೋ ಸಣ್ಣ ವಿಷಯಕ್ಕೆ ಜಗಳ ಪ್ರಾರಂಭವಾಗಿ ಕೈಕೈಮಿಲಾಯಿಸುವ ಹಂತಕ್ಕೆ ಹೋಗಿತ್ತೆಂದು ಪೊಲೀಸರು ತಿಳಿದ್ದಾರೆ.


ಕೋಪಗೊಂಡಿದ್ದ ಹೇಮಂತ್ ಪೂಜಾರಿ ಅಲ್ಬರ್ಟ್ ಮನೆಯ ಕಿಟಕಿಯನ್ನು ಕೈಯಲ್ಲಿ ಬಡಿಯುತ್ತಿದ್ದ, ಈ ರೀತಿ ಮಾಡಬೇಡ ಎಂದು ಹಲವು ಬಾರಿ ಹೇಳಿದರೂ ಕೇಳದ ಹೇಮಂತ್‌ಗೆ ಮರದ ದೊಣ್ಣೆಯಿಂದ ಅಲ್ಬರ್ಟ್ ನಾಲ್ಕೈದು ಬಾರಿ ಹೊಡೆದಿದ್ದ ಎನ್ನಲಾಗಿದೆ.


ಮದ್ಯದ ನಶೆ ಸ್ವಲ್ಪ ಇಳಿದಾಗ ಹೇಮಂತ್ ಏಳದಿರುವುದನ್ನು ಕಂಡು ನೋಡಿದ ಅಲ್ಬರ್ಟ್ ಆತ ಮೃತ ಪಟ್ಟಿರುವುದು ತಿಳಿದ ತಕ್ಷಣ ಮನೆಯ ಅಂಗಳದ ಎದುರೇ ಸುಟ್ಟಿದ್ದ, ಇದನ್ನು ತಿಳಿದ ಸ್ಥಳೀಯರು ಸಂಶಯಗೊಂಡು ಶಿರ್ವ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರೋಪಿಯನ್ನು ಶಿರ್ವ ಠಾಣಾಧಿಕಾರಿ ಶ್ರೀಶೈಲಾ ಅವರು ಶನಿವಾರ ಮುಂಜಾನೆ ಕಳತ್ತೂರು ಬಸ್ ನಿಲ್ದಾಣ ಬಳಿ ಬಂಧಿಸಿದ್ದಾರೆ.



ಇಬ್ಬರೂ ಕುಡಿದ ಮತ್ತಿನಲ್ಲಿದ್ದರು, ಅಲ್ಬರ್ಟ್ ಹೊಡೆದ ಏಟು ಹೇಮಂತ್‌ನ ತಲೆಗೆ ತೀವೃವಾಗಿ ಬಿದ್ದ ಪರಿಣಾಮ ವಿಪರೀತ ರಕ್ತ ಸ್ರಾವವಾಗಿ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ. ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಇಬ್ಬರೂ ಸುಮಾರು ಹತ್ತು ವರ್ಷಗಳಿಂದ ಸ್ನೇಹಿತರಾಗಿದ್ದು, ಹೇಮಂತ್ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಹದಿನೈದು ವರ್ಷಗಳಾಗಿದ್ದು, ವಿಪರೀತ ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ. ಅಲ್ಬರ್ಟ್ ಅವಿವಾಹಿತನಾಗಿದ್ದು, ಈ ಹಿಂದೆ ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!