ಶೇ.40 ಕಮಿಷನ್‌ ದಂಧೆ- 25ಕ್ಕೂ ಹೆಚ್ಚು ಶಾಸಕರಿಗೆ ಆಪತ್ತು-ದಾಖಲೆ ಬಿಡುಗಡೆ ಮಾಡಿದರೆ ಸರ್ಕಾರ ಪತನ: ಡಿ.ಕೆಂಪಣ್ಣ

ತುಮಕೂರು: ‘ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಶೇ 40 ಕಮಿಷನ್‌ಗೆ ಸಂಬಂಧಿಸಿದಂತೆ ನಮ್ಮಲ್ಲಿರುವ ದಾಖಲೆಗಳನ್ನು ಬಿಡುಗಡೆಗೊಳಿಸಿದರೆ ಸರ್ಕಾರ ಒಂದು ದಿನವೂ ಅಧಿಕಾರದಲ್ಲಿ ಇರಲ್ಲ. 25ಕ್ಕೂ ಹೆಚ್ಚು ಶಾಸಕರು, ನಾಲ್ವರು ಮುಖ್ಯ ಎಂಜಿನಿಯರ್‌ಗಳು ಅಧಿಕಾರ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಲಿ’ ಎಂದು ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆಂಪಣ್ಣ ಶುಕ್ರವಾರ ಇಲ್ಲಿ ಒತ್ತಾಯಿಸಿದರು.

‘ಎಲ್ಲ ಪಕ್ಷಗಳ ಅಧಿಕಾರದಲ್ಲೂ ಭ್ರಷ್ಟಾಚಾರ ಒಂದು ಭಾಗವಾಗಿದೆ. ಆದರೆ, ಈಗ ಅದರ ಪ್ರಭಾವ, ಪ್ರಮಾಣ ಹೆಚ್ಚಾಗಿದೆ. ಶೇ 40 ರಷ್ಟು ಕಮಿಷನ್‌ ಸರ್ಕಾರವಾಗಿ ಮಾರ್ಪಟ್ಟಿದೆ. ಗುತ್ತಿಗೆದಾರರು ಯಾವುದಾದರೂ ಕಾಮಗಾರಿ ಗುತ್ತಿಗೆ ಪಡೆಯಬೇಕಾದರೆ ಮುಂಗಡ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.

‘ರಾಜ್ಯದಲ್ಲಿ ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಮಾರ್ಚ್‌ 10ರ ನಂತರ ಸಮಯಾವಕಾಶ ದೊರೆತರೆ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ರಾಜ್ಯದ ಗುತ್ತಿಗೆದಾರರು ಮುಖ್ಯಮಂತ್ರಿಗೆ ಪತ್ರ ಚಳವಳಿ ಹಮ್ಮಿಕೊಳ್ಳಲಿದ್ದಾರೆ. ಮುಖ್ಯಮಂತ್ರಿಯವರ ಭೇಟಿಗಾಗಿ ಹಲವು ಸಲ ಮನವಿ ಸಲ್ಲಿಸಿದರೂ ಅವರು ಅನುಮತಿ ನೀಡಿಲ್ಲ. ನಮ್ಮ ಎಲ್ಲ ಸಮಸ್ಯೆಗಳ ಕಡೆ ಗಮನಹರಿಸಿ ಮಾತುಕತೆಗೆ ಕರೆಯಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಕೆಂಪಣ್ಣ ಎಚ್ಚರಿಸಿದರು.

‘ರಾಜ್ಯದಲ್ಲಿ 17 ಸಾವಿರ ಗುತ್ತಿಗೆದಾರರಿದ್ದಾರೆ. ಅದರಲ್ಲಿ ಕೇವಲ 296 ಜನ ಹೊರ ರಾಜ್ಯದ ಗುತ್ತಿಗೆದಾರರಿದ್ದು, ಶೇ 90 ರಷ್ಟು ಕೆಲಸಗಳನ್ನು ಅವರೇ ನಿರ್ವಹಿಸುತ್ತಿದ್ದಾರೆ. ಹಲವು ಕಾಮಗಾರಿ ಒಂದುಗೂಡಿಸುವ ಪ್ಯಾಕೇಜ್‌ ಪದ್ದತಿ ತೆಗೆದು ಹಾಕಬೇಕು. ಇದರಿಂದ ಆಯಾ ಪ್ರದೇಶದ ಗುತ್ತಿಗೆದಾರರಿಗೆ ತೊಂದರೆಯಾಗುತ್ತಿದೆ. ಬೇರೆ ಯಾವ ರಾಜ್ಯದಲ್ಲೂ ಇಲ್ಲದ ಪ್ಯಾಕೇಜ್ ಪದ್ಧತಿ ನಮ್ಮ ರಾಜ್ಯದಲ್ಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಆರ್‌ಐಡಿಎಲ್ ಅಡಿ ವಿವಿಧ ಕಾಮಗಾರಿಗಳಿಗಾಗಿ ₹25 ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ, ಇದರಲ್ಲಿ ಶೇ 25 ರಷ್ಟೂ ಕೆಲಸವಾಗಿಲ್ಲ. ಗುಣಮಟ್ಟ ಪರೀಕ್ಷೆ ಮಾಡುವವರೇ ಇಲ್ಲ. ಸುಳ್ಳು ದಾಖಲೆ ಪಡೆದು ಟೆಂಡರ್ ನೀಡುವ ಕೆಲಸ ಮಾಡುತ್ತಿದ್ದಾರೆ. ನಿರ್ಮಿತಿ ಕೇಂದ್ರದವರಿಗೆ ಯಾಕೆ ಕೆಲಸ ಕೊಡ್ತಾರೆ? ಅಧಿಕಾರಿಗಳೊಂದಿಗೆ ಕೈಜೋಡಿಸಿ ನಕಲಿ ದಾಖಲೆ ನೀಡಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ನಮ್ಮ ಸ್ಥಳೀಯ ಗುತ್ತಿಗೆದಾರರ ಪ್ರತಿಯೊಂದು ಕೆಲಸವನ್ನು ಪರಿಶೀಲಿಸುತ್ತಾರೆ. ಅರ್ಧಂಬರ್ಧ ಕೆಲಸ ಮಾಡಿ ಓಡಿ ಹೋಗಿರುವವರ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಂಡಿದೆ’ ಎಂದು ಪ್ರಶ್ನಿಸಿದರು. 

Leave a Reply

Your email address will not be published. Required fields are marked *

error: Content is protected !!