| ಹೊಸದಿಲ್ಲಿ ಜ.15: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಪತನಕ್ಕೆ ಪೈಲಟ್ ದೋಷವೇ ಕಾರಣ ಎಂದು ತನಿಖಾ ತಂಡದ ವರದಿ ಹೇಳಿದೆ.
ಈ ಬಗ್ಗೆ ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ವರದಿ ಪ್ರಸಾರ ಮಾಡಿದ್ದು, ಮೋಡಗಳ ಮೂಲಕ ಹೆಲಿಕಾಪ್ಟರ್ ಕಣಿವೆಗೆ ಪ್ರವೇಶಿಸುತ್ತಿದ್ದಂತೆ ಉಂಟಾದ ಅನಿರೀಕ್ಷಿತ ಹವಾಮಾನ ಬದಲಾವಣೆಯು ಪೈಲಟ್ ಗೊಂದಲಕ್ಕೆ ಕಾರಣವಾಗಿದೆ ಎಂದು ತನಿಖಾ ತಂಡದ ಪ್ರಾಥಮಿಕ ಸಂಶೋಧನೆಗಳಲ್ಲಿ ತಿಳಿದು ಬಂದಿದೆ.
ಹೆಲಿಕಾಪ್ಟರ್ನ ಕಾಕ್ಪಿಟ್ನ ದತ್ತಾಂಶಗಳನ್ನು ಪರಿಶೀಲಿಸಿರುವ ತಂಡ,ಅಪಘಾತಕ್ಕೂ ಮುನ್ನ ಪೈಲಟ್’ಗಳು ಗೊಂದಲಕ್ಕೆ ಒಳಗಾಗಿರುವುದು ವಾಯ್ಸ್ ರೆಕಾರ್ಡರಲ್ಲಿ ದಾಖಲಾಗಿರುವ ಧ್ವನಿಮುದ್ರಿಕೆಗಳನ್ನು ಪರೀಕ್ಷೆಗೆ ಒಳಪಡಿಸಿ, ಅಪಘಾತಕ್ಕೆ ಪ್ರಾಥಮಿಕ ಕಾರಣಗಳನ್ನು ಕಂಡು ಹಿಡಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಡಿ.8 ರಂದು ರಕ್ಷಣಾ ಪಡೆಗಳ ಮುಖಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ತಮಿಳು ನಾಡಿನ ಕೊಯಮತ್ತೂರು ಮತ್ತು ವೆಲ್ಲಿಂಗ್ಟನ್ ನಡುವೆ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ ಹೆಲಿಕಾಪ್ಟರ್ ನಲ್ಲಿ ಇದ್ದ 13 ಮಂದಿಯೂ ಹುತಾತ್ಮರಾಗಿದ್ದರು.
| |