ಉತ್ತರಪ್ರದೇಶ: ಬಿಜೆಪಿಗೆ ಮತ್ತೆ ಆಘಾತ, ಮೂರು ದಿನದಲ್ಲಿ 7 ಶಾಸಕರ ರಾಜಿನಾಮೆ!
ಫಿರೋಜಬಾದ್: ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕರ ರಾಜಿನಾಮೆ ಪರ್ವ ಮುಂದುವರೆದಿದೆ. ಇಂದು ಶಿಕೋರಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಮುಕೇಶ್ ವರ್ಮಾ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ಹಿಂದುಳಿದ ವರ್ಗಗಳು ಮತ್ತು ದಲಿತರ ಬಗ್ಗೆ ಸರ್ಕಾರದಿಂದ ಗೌರವದ ಕೊರತೆಯಿದೆ ಎಂದು ಆರೋಪಿಸಿ ಮುಕೇಶ್ ವರ್ಮಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ಇಬ್ಬರು ಸಚಿವರು ಹಾಗೂ ಐವರು ಶಾಸಕರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ಹಿಂದುಳಿದ ವರ್ಗಗಳು, ದಲಿತರು, ನಿರುದ್ಯೋಗಿ ಯುವಕರು, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ವ್ಯಾಪಾರಿಗಳು ಮತ್ತು ಅಂಗಡಿಕಾರರನ್ನು ಕಡೆಗಣಿಸಲಾಗಿರುವುದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವರ್ಮಾ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ಹಿಂದುಳಿದ ವರ್ಗಗಳ(ಒಬಿಸಿ) ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ನೇತೃತ್ವದಲ್ಲಿ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದರು. ಇನ್ನು ಮುಕೇಶ್ ವರ್ಮಾ ಸಮಾಜವಾದಿ ಪಕ್ಷ (ಎಸ್ಪಿ) ಸೇರುತ್ತಾರೆ ಎಂಬ ಊಹಾಪೋಹಗಳಿವೆ