ದ,ಕ-ಉಡುಪಿ: ಜಾನುವಾರುಗಳಿಗೆ ಮೇವಿನ ತೀವ್ರ ಕೊರತೆ
ಉಡುಪಿ: ಅಕಾಲಿಕ ಮಳೆ ಹಾಗೂ ಕಚ್ಚಾ ಸಾಮಗ್ರಿಗಳ ಕೊರತೆಯಿಂದ ಕರ್ನಾಟಕ ಹಾಲು ಫೆಡರೇಶನ್ ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಾನುವಾರುಗಳ ಮೇವಿನ ಕೊರತೆ ಉಂಟಾಗಿದೆ.
ಎರಡು ಜಿಲ್ಲೆಗಳ ಹೈನುಗಾರರು ಹಸುಗಳಿಗೆ ಆಹಾರಕ್ಕಾಗಿ ನೇಪಿಯರ್ ಹುಲ್ಲು ಮತ್ತು ಒಣ ಹುಲ್ಲಿನ ಮೇಲೆ ಅವಲಂಬಿತ ರಾಗಿದ್ದರೂ, ನವೆಂಬರ್‌ನಲ್ಲಿನ ಅಕಾಲಿಕ ಮಳೆಯಿಂದ ಈ ಪ್ರದೇಶದಾದ್ಯಂತ ಒಣ ಹುಲ್ಲು ಕೊಳೆತಿದ್ದು, 733 ಹಾಲು ಉತ್ಪಾದಕರ ಸಹಕಾರ ಸಂಘಗಳ ಒಂದು ಲಕ್ಷಕ್ಕೂ ಹೆಚ್ಚು ಹೈನುಗಾರರು ಮೇವು ಪೂರೈಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಆದರೆ ಕೆಎಂಎಫ್ ತನ್ನ ಘಟಕಗಳಿರುವ ಹಾಸನ, ರಾಜನಕುಂಟೆ ಮತ್ತು ಶಿಕಾರಿಪುರದಿಂದ ಮೇವು ಪೂರೈಸಬೇಕು. ಬೇಡಿಕೆ ಬಹುಪಟ್ಟು ಹೆಚ್ಚಿದ್ದರೂ, ತೈಲರಹಿತ ಭತ್ತದ ಹೊಟ್ಟು ಮತ್ತು ಮೆಕ್ಕೆಜೋಳ ಸೇರಿದಂತೆ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಈ ಘಟಕಗಳಲ್ಲಿ ಉತ್ಪಾದನೆಗೆ ಹೊಡೆತ ಬಿದ್ದಿದೆ. ಹೈನುಗಾರರಿಗೆ ಕೆಎಂಎಫ್‌ನಿಂದ ಮೇವು ಪಡೆಯಲು ಕಾಯುವ ಅವಧಿ ಹೆಚ್ಚಾಗಿದ್ದು ಹಾಲಿನ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.
ಜಾನುವಾರುಗಳ ಮೇವಿನ ತೀವ್ರ ಕೊರತೆಯಿದೆ ಎಂದು ಕುಂದಾಪುರದ ಅಸೋಡುವಿನ ಹೈನುಗಾರ ರವಿರಾಜ್ ಶೆಟ್ಟಿ ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಖಾಸಗಿ ಕಂಪನಿಗಳು 50 ಕೆಜಿ ಮೇವಿನ ಚೀಲವನ್ನು 1,400 ರೂ.ಗೆ ಮಾರಾಟ ಮಾಡಿದರೆ, ಕೆಎಂಎಫ್ 1,050 ರೂ.ಗೆ ಪೂರೈಸುತ್ತದೆ. ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಜಾನುವಾರು ಮೇವು ಉತ್ಪಾದನಾ ಘಟಕವನ್ನು ಸ್ಥಾಪಿಸಬೇಕು ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ ನಿರ್ದೇಶಕರಿಗೆ ನಾನು ಹೇಳಿದ್ದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇವು ಉತ್ಪಾದನಾ ಘಟಕ ಆರಂಭಿಸಲು ಕೆಎಂಎಫ್‌ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು DKMUL ನಿರ್ದೇಶಕ ಸಾಣೂರು ನರಸಿಂಹ ಕಾಮತ್ ತಿಳಿಸಿದ್ದಾರೆ. ಪುತ್ತೂರಿನಲ್ಲಿ 40 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದ್ದು, ಅಲ್ಲಿ ಘಟಕವನ್ನು ಪ್ರಾರಂಭಿಸಬಹುದು ಎಂದು ಅವರು ಹೇಳಿದರು.
ಡಿಕೆಎಂಯುಎಲ್ ‘ಹಸಿರು ಮೇವು ಉತ್ಪಾದನೆ’ ಯೋಜನೆಯನ್ನು ಉತ್ತೇಜಿಸುತ್ತಿದೆ, ಅಲ್ಲಿ ಹೈಬ್ರಿಡ್ ನೇಪಿಯರ್ ಹುಲ್ಲು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗುತ್ತದೆ. “ಒಂದು ಎಕರೆ ಜಮೀನಿನಲ್ಲಿ ನೇಪಿಯರ್ ಬೆಳೆಯಲು ಅವರಿಗೆ 20,000 ರೂ (ಮೂರು ವರ್ಷಗಳಿಗೆ) ಪ್ರೋತ್ಸಾಹಧನ ನೀಡಲಾಗುತ್ತದೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ 3,000 ಎಕರೆಗೂ ಹೆಚ್ಚು ಪ್ರದೇಶವನ್ನು ಯೋಜನೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.
ಎರಡು ಜಿಲ್ಲೆಗಳಲ್ಲಿ ಒಂದರಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಿದರೆ ಮೇವಿನ ಕೊರತೆ ನೀಗಬಹುದು ಎಂದು ಡಿಕೆಎಂಯುಎಲ್ ಅಧ್ಯಕ್ಷ ರವಿರಾಜ ಹೆಗಡೆ ಕೊಡವೂರು ಹೇಳಿದರು. ಕೆಎಂಎಫ್‌ನಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದರು. ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಕುರಿತು ಕೆಎಂಎಫ್ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ.