ಕೆಮ್ಮಣ್ಣು: ಕೊರೋನಾ ಕಾರ್ಯಪಡೆಯ ಸಭೆ, ಮಾಸ್ಕ್ ಧರಿಸುವ ಜನಜಾಗೃತಿ

ಕೆಮ್ಮಣ್ಣು : ತೋನ್ಸೆ (ಕೆಮ್ಮಣ್ಣು) ಗ್ರಾಮ ಪಂಚಾಯತಿನ ಕೊರೋನಾ ಕಾರ್ಯಪಡೆಯ ಸಭೆ ಗುರುವಾರ ಗ್ರಾಮ ಪಂಚಾಯತಿನ ಸಭಾಭವನದಲ್ಲಿ ಜರಗಿತು.


ಸಭೆಯ ಅಧ್ಯಕ್ಷತೆಯನ್ನು ಗ್ರಾ ಪಂ ನ ಆಡಳಿತಾಧಿಕಾರಿ ಡಾ.ಪ್ರಶಾಂತ್ ಕುಮಾರ್ ವಹಿಸಿದ್ದರು.ಸಭೆಯಲ್ಲಿ ಗ್ರಾ ಪಂ ನ ಚುನಾಯಿತ ಆಡಳಿತ ಮಂಡಳಿಯ ಅಧಿಕಾರವಧಿ ಮುಗಿದ ಹಿನ್ನಲೆಯಲ್ಲಿ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪುನಾರ್ರಚಿಸಲಾಯಿತು.ಗ್ರಾ ಪಂ ವ್ಯಾಪ್ತಿಯಲ್ಲಿ ಈ ವರೆಗೆ 10 ಜನರಿಗೆ ಸೋಂಕು ತಗುಲಿದ್ದು, ಬಹುತೇಕರದ್ದು ನೆಗಟಿವ್ ಆಗಿದೆ. ಉಳಿದವರದ್ದೂ ನೆಗಟಿವ್ ಆಗುವ ಸಾಧ್ಯತೆಗಳಿವೆ.

ಗ್ರಾಮದಲ್ಲಿ ಮುಂದೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಇನ್ನಷ್ಟು ಜನಜಾಗೃತಿ ಮೂಡಿಸಲು ನಿರ್ಧರಿಸಲಾಯಿತು.ಕೊರೋನಾ ಸೋಂಕಿತರ ರಿಪೋರ್ಟ್ ಶೀಘ್ರ ದೊರಕಬೇಕು ಮತ್ತು ಅದು ಆ ಮನೆಯವರಿಗೂ ತಿಳಿಯುವಂತಾಗಬೇಕು. ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸುವಾಗ ಕಾರ್ಯಪಡೆಯ ಗಮನಕ್ಕೆ ತಂದು ಸೌಜನ್ಯಯುತವಾಗಿ ಅವರನ್ನು ಕರೆದೊಯ್ಯುವ ವ್ಯವಸ್ಥೆಗಳಾಗಬೇಕು.

ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಾಗ ಅವರನ್ನು ಮತ್ತೆ ಮನೆಗೆ ಕರೆತರಲು ವ್ಯವಸ್ಥೆಗಳಾಗಬೇಕು ಎಂಬ ಒತ್ತಾಯ ಕೇಳಿ ಬಂತು.ಗ್ರಾಮ ವ್ಯಾಪ್ತಿಯಲ್ಲಿನ ದುರ್ಬಲ ವರ್ಗಗಳ ಪತ್ತೆ ಹಚ್ಚುವಿಕೆ ಮತ್ತು ಅವರ ಬೇರೆ ರೋಗಗಳ ಮಾಹಿತಿ ಪಡೆದು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕಾರ್ಯಪಡೆ ಸಹಕಾರ ನೀಡಬೇಕು. ಈ ಹಿನ್ನಲೆಯಲ್ಲಿ ಗ್ರಾ ಪಂ ವ್ಯಾಪ್ತಿಯ ಎರಡು ಕಡೆ ಆರೋಗ್ಯ ಸೇವಾ ಕೇಂದ್ರವನ್ನು ದಾನಿಗಳ / ಸ್ವಯಂ ಸೇವಾ ಸಂಘಟನೆಗಳ ನೆರವಿನಲ್ಲಿ ತೆರೆಯುವ ಬಗ್ಗೆ ಆಸಕ್ತಿವಹಿಸಲು ನಿರ್ಧರಿಸಲಾಯಿತು.

ಸರಕಾರ ಮತ್ತು ಜಿಲ್ಲಾಧಿಕಾರಿಗಳ ಸೂಚನೆಯಂತೆ ಗ್ರಾ ಪಂ ವ್ಯಾಪ್ತಿಯಲ್ಲಿ ಕೋವಿಡ್ 19 ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ದಂಡನೆ ವಿಧಿಸುವ ಬಗ್ಗೆ ಈಗಾಗಲೇ ಪ್ರಕಟಣೆ ಹೊರಡಿಸಲಾಗಿದ್ದು, ಅದರಂತೆ ಮಾಸ್ಕ್ ಧರಿಸದೇ ಓಡಾಡುತ್ತಿದ್ದ 9 ಜನರಿಂದ ತಲಾ ರೂ.100ರಂತೆ ಒಟ್ಟು ರೂ.900 ದಂಡ ವಸೂಲಿ ಮಾಡಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು. ಹೂಡೆಯ ಚಿಕನ್ ಅಂಗಡಿಯೊಂದರಲ್ಲಿ ಪರವಾನಿಗೆ ಇಲ್ಲದೇ ವ್ಯಾಪಾರ ನಡೆಸುತ್ತಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಮಾಸ್ಕ್ ಧರಿಸದೇ ವ್ಯವಹಾರ ನಡೆಯುತ್ತಿದ್ದು ಅವರಿಗೆ ತಿಳುವಳಿಕೆಯನ್ನು ಮೌಖಿಕವಾಗಿ ನೀಡಿದರೂ ನಿಯಮ ಉಲ್ಲಂಘಿಸುತ್ತಿರುವುದರಿಂದ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮೊದಲಾದ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ನಿಯಮಾನುಸಾರ ದಂಡ ವಿಧಿಸಲು ನಿರ್ಧರಿಸಲಾಯಿತು. ಹೂಡೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರು ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸದೇ ಇರುವ ಬಗ್ಗೆ ಆರೋಪಗಳು ಕೇಳಿ ಬಂದವು.ಸಭೆಯಲ್ಲಿ ಮಲ್ಪೆ ಪೊಲೀಸ್ ಠಾಣಾಧಿಕಾರಿ ತಿಮ್ಮೇಶ್, ಗ್ರಾಮ ಲೆಕ್ಕಾಧಿಕಾರಿ ರೇಷ್ಮಾ, ಕಿರಿಯ ಆರೋಗ್ಯ ಸಹಾಯಕ ರಮೇಶ್, ಗ್ರಾ ಪಂ ನ ನಿಕಟಪೂರ್ವ ಅಧ್ಯಕ್ಷರಾದ ಫೌಜಿಯಾ ಸಾದಿಕ್, ನಿಕಟಪೂರ್ವ ಸದಸ್ಯರುಗಳಾದ ನಿತ್ಯಾನಂದ ಕೆಮ್ಮಣ್ಣು,  ವೆಂಕಟೇಶ ಜಿ ಕುಂದರ್, ಮಹಮ್ಮದ್ ಇದ್ರೀಸ್, ಶ್ರೀಧರ, ಅಶ್ಫಾಕ್ ತೋನ್ಸೆ, ಕೊರೋನಾ ಸೈನಿಕ ಉಸ್ತಾದ್ ಸಾದಿಕ್ ಗ್ರಾ ಪಂ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನಿತ್ತರು.ಸರಕಾರದ ನಿಯಮದಂತೆ ಮಾಜಿ ಗ್ರಾ ಪಂ ಸದಸ್ಯರುಗಳ ಪೈಕಿ ಸಭೆಯಲ್ಲಿ ಉಪಸ್ಥಿತರಿರುವವರನ್ನು ಕಾರ್ಯಪಡೆಯ ಸದಸ್ಯರುಗಳಾಗಿ ಸೇರಿಸಿಕೊಳ್ಳಲು ನಿರ್ಧರಿಸಲಾಯಿತು.
ಸಭೆಯ ಬಳಿಕ ಆಡಳಿತಾಧಿಕಾರಿಯವರ ನೇತೃತ್ವದಲ್ಲಿ ಕೆಮ್ಮಣ್ಣಿನ ವಾರದ ಸಂತೆಯಲ್ಲಿ ಸಂಚರಿಸಿ ಕೊರೋನಾ ನಿಯಮಗಳ ಪಾಲನೆ ಮತ್ತು ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಲ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ದಿನಕರ್ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!