ಕಾಂಗ್ರೆಸ್ ಅಧ್ಯಕ್ಷರಿಗೆ ಜಾಮೀನು ಪಡೆಯುವ ಸ್ಥಿತಿ ಬಂದಿದ್ದು ಯಾಕೆ: ನಳೀನ್
ಬೆಂಗಳೂರು: ಕಾಮಾಲೆ ಕಣ್ಣಿನವರಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುವಂತೆ ಕಾಂಗ್ರೆಸ್ಸಿಗರಿಗೆ ಎಲ್ಲರೂ ಭ್ರಷ್ಟಾಚಾರಿಗಳಂತೆ ಕಾಣುತ್ತಾರೆ. ಆದರೆ, ಅವರ ಪಕ್ಷದ ಅಧ್ಯಕ್ಷರು ಜಾಮೀನು ಪಡೆಯುವ ಸ್ಥಿತಿ ಬಂದದ್ದು ಏಕೆ ಎಂದು ಸಿದ್ದರಾಮಯ್ಯ ಜನರಿಗೆ ಹೇಳಲಿ ಎಂದು ಬಿಜಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿ ಕಾರಿದ್ದಾರೆ.
ಕೋವಿಡ್ ನಿರ್ವಹಣೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ನಾಲ್ಕು ತಿಂಗಳಲ್ಲಿ 4,167 ಕೋಟಿ ಖರ್ಚು ಮಾಡಿದೆ. ಅದರಲ್ಲಿ ಎರಡು ಸಾವಿರ ಕೋಟಿ ಸಚಿವರು ಹಾಗೂ ಅಧಿಕಾರಿಗಳ ಜೇಬಿಗೆ ಹೋಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೂ ಇದ್ದರು.
ಸಿದ್ದರಾಮಯ್ಯ ಅವರ ಆರೋಪಕ್ಕೆ ಟ್ವಿಟರ್ ಮೂಲಕ ಟೀಕೆ ಮಾಡಿರುವ ನಳೀನ್ ಕುಮಾರ್ ಕಟೀಲ್, ‘ಕಾಮಾಲೆ ಕಣ್ಣಿನವರಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುವಂತೆ ಕಾಂಗ್ರೆಸ್ಸಿಗರಿಗೆ ಎಲ್ಲರೂ ಭ್ರಷ್ಟಾಚಾರಿಗಳಂತೆ ಕಾಣುತ್ತಾರೆ. ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಜಾಮೀನು ಪಡೆದು ಹೊರಗಿದ್ದಾರೆ. ಅವರೆಲ್ಲ ಜಾಮೀನು ಪಡೆಯುವ ಸ್ಥಿತಿ ಯಾಕೆ ಬಂತು ಎಂಬುದನ್ನೂ ಜನರಿಗೆ ಹೇಳಿ ಸಿದ್ದರಾಮಯ್ಯ ಅವರೆ,’ ಎಂದು ಕಟೀಲ್ ಸವಾಲು ಎಸೆದಿದ್ದಾರೆ.
‘ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಅನುಮಾನಗಳಿದ್ದರೆ ಬಗೆಹರಿಸುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದರೂ ಕಾಂಗ್ರೆಸ್ ನಾಯಕರು ಮತ್ತದೇ ಆರೋಪಗಳನ್ನು ಮಾಡಿದ್ದಾರೆ. ಕೊರೋನಾದಿಂದ ಹಾದಿಬೀದಿಯಲ್ಲಿ ಜನ ಸಾಯುತ್ತಿದ್ದಾರೆ ಎಂದು ಹಸಿ ಸುಳ್ಳು ಹೇಳಿ ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಸುವ ಕೆಲಸದಲ್ಲಿ ನಿರತರಾಗಿದ್ದಾರೆ,’ ಎಂದು ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ಮಾಡಿದರು.
‘ಕೊರೋನಾ ಸಂದರ್ಭದಲ್ಲಿ ಜನರಲ್ಲಿ ಆತ್ಮಸ್ಥೈರ್ಯ ಮೂಡಿಸು ಕೆಲಸವನ್ನು ನಾವು ಜನಪ್ರತಿನಿಧಿಗಳು ಮಾಡಬೇಕಿದೆ. ಅದು ಬಿಟ್ಟು ಕಾಂಗ್ರೆಸ್ಸಿಗರು ರಾಜಕಾರಣ ಮಾಡಲು ಹೊರಟಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಆತಂಕಕ್ಕೀಡುಮಾಡುವ ಕೆಲಸವನ್ನು ಮೊದಲು ನಿಲ್ಲಿಸಲಿ. ಎಲ್ಲರೂ ಒಟ್ಟಾಗಿ ಕೊರೋನಾ ವಿರುದ್ಧದ ಸಮರ ಗೆಲ್ಲುವುದು ನಮ್ಮೆಲ್ಲರ ಗುರಿಯಾಗಲಿ,’ ಎಂದು ಅವರು ಸಲಹೆ ನೀಡಿದ್ದಾರೆ.