ಇನ್ನು ಮುಂದೆ ಲಾಕ್ ಡೌನ್ ಇರುವುದಿಲ್ಲ, ಸೋಂಕನ್ನು ಸಮರ್ಥವಾಗಿ ಎದುರಿಸಿ ನಿಯಂತ್ರಿಸುತ್ತೇವೆ: ಡಾ ಕೆ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಕಳೆದುಹೋಗಿರುವ ನೀತಿ, ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಇನ್ನು ಮುಂದೆ ಇರುವುದಿಲ್ಲ, ಇನ್ನೇನಿದ್ದರೂ ನಿರ್ಬಂಧ, ನಿಯಮಗಳ ಕಟ್ಟುನಿಟ್ಟಿನ ಪಾಲನೆಯಷ್ಟೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ಎರಡು ವಾರಗಳ ಕಾಲ ಕೋವಿಡ್ ನಿರ್ಬಂಧ, ವೀಕೆಂಡ್ ಕರ್ಫ್ಯೂ ಎಂದು ಹೇರಿದ್ದ ಸರ್ಕಾರ ಇನ್ನು ಮುಂದೆ ಲಾಕ್ ಡೌನ್ ಮಾಡುತ್ತದೆಯೇ ಎಂಬ ಸಂಶಯ, ಗೊಂದಲ, ಭಯ-ಆತಂಕ ರಾಜ್ಯದ ಜನರಲ್ಲಿ ಮನೆಮಾಡಿತ್ತು. ಅದಕ್ಕೆ ಆರೋಗ್ಯ ಸಚಿವರೇ ಇಂದು ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವರು ಕೊರೋನಾ ಮೂರನೇ ಅಲೆಯ ಈ ಸಂದರ್ಭದಲ್ಲಿ ಜನರು ಸ್ವಆಸಕ್ತಿಯಿಂದ ಮುಂದೆ ಬಂದು ಕೋವಿಡ್ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳಬೇಕು ಎಂದರು.

ಈಗಾಗಲೇ 25 ಸಾವಿರ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲನೇ ಡೋಸ್ ನೀಡಿದ್ದು ಕೋವಿಡ್ ಲಸಿಕೆ ನೀಡಿಕೆಯಲ್ಲಿ ಕರ್ನಾಟಕ ಇಡೀ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಉಡುಪಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅತಿಹೆಚ್ಚು ಕೋವಿಡ್ ಪಾಸಿಟಿವ್ ದರ ವರದಿಯಾಗುತ್ತಿದೆ. ಈ ಜಿಲ್ಲೆಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದರು.

ನಿನ್ನೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಸುಮಾರು ಒಂದು ಗಂಟೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಅದರಲ್ಲಿ ಎರಡು ಪ್ರಮುಖ ಅಂಶ ತಿಳಿಸಿದ್ದಾರೆ. ಒಂದು ರಾಜ್ಯ, ದೇಶದಲ್ಲಿ ಸಂಪೂರ್ಣ ಲಸಿಕೆ ನೀಡುವ ಮೂಲಕ ಸಾಂಕ್ರಾಮಿಕ ತಡೆಯಲು ಸಾಧ್ಯವಿಲ್ಲ. ಇಡೀ ಪ್ರಪಂಚದಲ್ಲಿ, ಎಲ್ಲಾ ದೇಶಗಳಲ್ಲಿ ಸಂಪೂರ್ಣ ಲಸಿಕೀರಣ ಆದರೆ ಮಾತ್ರ ಕೋವಿಡ್ ಸೋಂಕನ್ನು ಸಂಪೂರ್ಣ ತಡೆಯಲು ಮತ್ತು ನಿವಾರಿಸಲು ಸಾಧ್ಯ ಎಂದು ಹೇಳಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕರು ಆರು ತಿಂಗಳ ಹಿಂದೆಯೇ ಮನಗಂಡು ಅನೇಕ ಬಡ ದೇಶಗಳಿಗೆ ಭಾರತದಿಂದ ಉಚಿತವಾಗಿ ಲಸಿಕೆ ಸರಬರಾಜು ಮಾಡಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿಸಿದೆ ಕೂಡ ಎಂದರು.

ಸಣ್ಣ ಸಣ್ಣ ದೇಶಗಳು ನಾಲ್ಕನೇ ಡೋಸ್ ಲಸಿಕೆ ಮಾಡುತ್ತಿರುವುದು ಉಪಯೋಗವಿಲ್ಲ ಎಂದು ಕೂಡ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಬಡದೇಶಗಳಿಗೆ ಹೆಚ್ಚಿನ ಲಸಿಕೆ ಇದ್ದರೆ ನೀಡಿ ಎಂದು ಡಬ್ಲ್ಯುಹೆಚ್ ಒ ಹೇಳಿದೆ ಎಂದು ಆರೋಗ್ಯ ಸಚಿವರು ಉಲ್ಲೇಖಿಸಿದರು.ಓಮಿಕ್ರಾನ್ ಸೋಂಕಿನಲ್ಲಿ ಭಾರತದಲ್ಲಿ ನಮ್ಮ ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂದರು.

ಓಮಿಕ್ರಾನ್ ಸೋಂಕು, ಕಡ್ಡಾಯ ಲಸಿಕೆ ಪಡೆಯಿರಿ: ಓಮಿಕ್ರಾನ್ ಸೋಂಕಿನ ತೀವ್ರತೆ ಗಂಭೀರ ಸ್ವರೂಪದಲ್ಲಿಲ್ಲ ಎಂಬುದು ನಿಜ. ಆದರೆ ಕೋವಿಡ್ ಎರಡೂ ಲಸಿಕೆ ಪಡೆಯದವರಲ್ಲಿ ಸೋಂಕು ತಗುಲಿದರೆ ತೀವ್ರತೆ ಹೆಚ್ಚಾಗುತ್ತದೆ. ಸಾವು ಕೂಡ ಸಂಭವಿಸಲು ಸಾಧ್ಯವಿದೆ. ಇನ್ನುಳಿದ ಶೇಕಡಾ 20ರಷ್ಟು ಮಂದಿ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದು ಸುರಕ್ಷಿತವಾಗಿರಿ, ಆಸ್ಪತ್ರೆಗೆ ಹೋಗುವುದು, ಐಸಿಯುಗೆ ದಾಖಲಾಗುವುದು, ಸಾವು ಸಂಭವಿಸುವುದು ತಪ್ಪುತ್ತದೆ ಎಂದರು.

ಲಾಕ್ ಡೌನ್ ಮುಗಿದ ಅಧ್ಯಾಯ, ಟೈಟ್ ರೂಲ್ಸ್: ಆರೋಗ್ಯ ಸಚಿವರು ಇಂದು ಹೇಳಿರುವ ಮತ್ತೊಂದು ಪ್ರಮುಖ ವಿಚಾರ ರಾಜ್ಯದಲ್ಲಿ ಲಾಕ್ ಡೌನ್ ಇನ್ನು ಮುಂದೆ ಇಲ್ಲ, ಆದರೆ ಕೊರೋನಾ ಟಫ್ ರೂಲ್ಸ್ ಹೆಚ್ಚಾಗುತ್ತದೆ. ಕಠಿಣ ನಿಯಮಗಳಿಂದಲೇ ಕೊರೋನಾ ನಿಯಂತ್ರಿಸುತ್ತೇವೆ, ಜನರ ಸಹಕಾರ ಬೇಕು ಎಂದರು.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಓಮಿಕ್ರಾನ್ ಸೇರಿದಂತೆ ಕೊರೋನಾ ಇನ್ನಷ್ಟು ಹೆಚ್ಚಾಗುತ್ತದೆ. ಸರ್ಕಾರದ ಅಂದಾಜು ಮೀರಿ ಕೇಸುಗಳು ವರದಿಯಾಗುತ್ತಿದೆ. ಕೇಸ್ ಎಷ್ಟೇ ಆದರೂ ಲಾಕ್ ಡೌನ್ ಮಾಡುವುದಿಲ್ಲ. ಲಾಕ್ ಡೌನ್ ಅನ್ನುವಂತಹದ್ದು ಕಳೆದುಹೋಗಿರುವ ನೀತಿ, ಯಾವಾಗ ನಮಗೆ ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿರುವಾಗ ತೆಗೆದುಕೊಂಡಿದ್ದ ನೀತಿ ಅದು, ಈಗ ಎರಡು ವರ್ಷದ ಅನುಭವವಿದೆ. ಒಬ್ಬರಿಗೆ ಪಾಸಿಟಿವ್ ಬಂದರೆ ಯಾವ ರೀತಿ ಚಿಕಿತ್ಸೆ ನೀಡಬಹುದು, ವ್ಯವಹರಿಸಬೇಕೆಂಬುದು ಸರ್ಕಾರದ ಗೊತ್ತಿದೆ, ಸ್ಪಷ್ಟ ಮಾಹಿತಿಯಿದೆ. ಅಲೆ ಬರುತ್ತಿದೆ, ಹೆದರಿಕೊಂಡು ಹೋಗುವುದಿಲ್ಲ, ಸಮರ್ಥವಾಗಿ ಎದುರಿಸುತ್ತೇವೆ ಎಂದರು. 

ಖಂಡಿತವಾಗಿಯೂ ಜನಸಾಮಾನ್ಯರ ಬದುಕಿಗೆ ತೊಂದರೆ ಕೊಡದೆ ಕಠಿಣ ನಿಯಮ ತರುತ್ತೇವೆ. ಕೇಸುಗಳು ಹೆಚ್ಚಾಗುತ್ತವೆ. ಇಡೀ ವಿಶ್ವದಲ್ಲಿರುವುದರಿಂದ ನಮ್ಮ ರಾಜ್ಯದಲ್ಲಿ ಸಂಪೂರ್ಣ ತಡೆಯಲು ಅಸಾಧ್ಯ, ಆದರೆ ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!