ಸಮಾಜದ ಕಳಕಳಿಯ ಬಗ್ಗೆ ಧ್ವನಿ ಎತ್ತುತ್ತಿದ್ದ ಕಾಂಗ್ರೆಸ್’ನ ಮುಖಂಡ ಜನಾರ್ದನ ಭಂಡಾರ್ಕರ್- ಸೊರಕೆ

ಉಡುಪಿ ಜ.7(ಉಡುಪಿ ಟೈಮ್ಸ್ ವರದಿ): ಇತ್ತೀಚಿಗೆ ನಿಧನರಾದ ಉಡುಪಿ ನಗರಸಭೆಯ ಮಾಜಿ ಸದಸ್ಯ, ಕಾಂಗ್ರೆಸ್’ನ ಹಿರಿಯ ಮುಖಂಡ ಜನಾರ್ದನ ಭಂಡಾರ್ಕರ್ ರವರ ಶ್ರದ್ಧಾಂಜಲಿ ಸಭೆ ಉಡುಪಿಯ ಕರಂಬಳ್ಳಿಯ ಮನೆಯಲ್ಲಿ ಬುಧವಾರ ನಡೆಯಿತು.

ಈ ವೇಳೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಮಾತನಾಡಿ, ಜನಾರ್ದನ ಭಂಡಾರ್ಕರ್ ಅವರು ಓರ್ವ ಅಪ್ಪಟ ಹೋರಾಟಗಾರ ಹಾಗೂ ಕಾಂಗ್ರೆಸ್ ನ ನಾಯಕನಾಗಿ ಸಮಾಜಕ್ಕೆ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾದಂತಹ ವ್ಯಕ್ತಿ. ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಅವರ ಸ್ವರ ಯಾವಾಗಲೂ ಸಮಾಜದ ಕಳಕಳಿಯ ವಿಚಾರದ ಬಗ್ಗೆಯೇ ಇರುತ್ತಿತ್ತು. ಇಂತಹ ಸಮಾಜಮುಖಿ ವ್ಯಕ್ತಿಯನ್ನು ಅಗಲಿರುವುದು ಅಪಾರ ನೋವುಂಟು ಮಾಡಿದೆ. ಅವರ ಕುಟುಂಬಕ್ಕೆ ಅವರ ಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ. ಅವರ ಹೆಸರು ಶಾಶ್ವತವಾಗಿ ಚಿರಾಯುವಾಗಿಸುವ ಕೆಲಸ ಆಗಲಿದೆ ಎಂದು ನುಡಿನಮನ ಸಲ್ಲಿಸಿದರು. 

ಈ ವೇಳೆ ಫಾ.ವಿಲಿಯಂ ಮಾರ್ಟಿಸ್ ಅವರು ಅಗಲಿದ ಜನಾರ್ದನ ಭಂಡಾರ್ಕರ್ ಅವರಿಗೆ ನುಡಿನಮನ ಸಲ್ಲಿಸಿ, ಎಲ್ಲಾ ರೀತಿಯಲ್ಲೂ ಪ್ರಾಮಾಣಿಕ ಸೇವೆ ಮಾಡಿದಂತಹ ವ್ಯಕ್ತಿ ಅವರು. ಯಾವುದೇ ಭೇದ ಭಾವ ಇರಬಾರದು ಎಂಬ ಕಾಳಜಿಯ ಉದ್ದೇಶದಿಂದ ಕೋಮು ಸೌಹಾರ್ದ ವೇದಿಕೆ ಪ್ರಾರಂಭಿಸಿ ಕ್ರಿಯಾತ್ಮಕ ರೀತಿಯಲ್ಲಿ ಪಾಲ್ಗೊಂಡ ವ್ಯಕ್ತಿ ಅವರು. ಸಹಬಾಳ್ವೆ ಯೋಜನೆಯ ಆರಂಭಿಸುವಾಗ ಮುಂಚೂಣಿಯಲ್ಲಿ ನಿಂತು ಎಲ್ಲಾ ಕೆಲಸಗಳನ್ನು ಮಾಡಿಕೊಟ್ಟಿದ್ದರು. ಅಪರೂಪದ ಪ್ರಾಮಾಣಿಕ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ನಮ್ಮ ಮನಸ್ಸಿನಲ್ಲಿ ಇವರು ಸಾಶ್ವತವಾಗಿ ಉಳಿಯಲಿದ್ದಾರೆ ಎಂದು ಹೇಳುತ್ತಾ ಭಾವುಕರಾದರು. ಈ ಸಂದರ್ಭ ಮುಖಂಡರಾದ ಅಮೃತ್ ಶೆಣೈ, ಶಾಂತರಾಮ್ ಸಾಲ್ವಂಕರ್, ಮಧುಕರ್ ಮುದ್ರಾಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಹರೀಶ್ ಕಿಣಿ, ಶ್ರೀರಾಮ ದಿವಾಣ, ಅಶೋಕ್ ಪೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಸಹಿತ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!